ಕೆಎಲ್ಎಸ್ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ, ಕ್ರೀಡಾ, ಎನ್ಎಸ್ಎಸ್ ಚಟುವಟಿಕೆಗಳಿಗೆ ಚಾಲನೆ
ಸ್ಪರ್ಧಾತ್ಮಕ ಪೈಪೋಟಿಯ ಯುಗದಲ್ಲಿ ವಿದ್ಯಾರ್ಥಿಗಳು ಯಾವುದೇ ಒತ್ತಡ ಚಿಂತೆಗೊಳಗಾಗದೇ ಚಿಂತನಾಪರ ಕ್ರಿಯಾಶೀಲ ವಿಚಾರ ಹೊಂದಬೇಕು. ವೃತ್ತಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡು ವೃತ್ತಿಯನ್ನು ಆನಂದಿಸಬೇಕು ಎಂದು ಧಾರವಾಡದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಗುರುನಾಥ ಬಡಿಗೇರ ಹೇಳಿದರು.
ಪಟ್ಟಣದ ಕೆ.ಎಲ್.ಎಸ್. ಪದವಿಪೂರ್ವ ಮಹಾವಿದ್ಯಾಲಯದ 2026-27ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ನಿಮಿತ್ತ ಆಯೋಜಿಸಿದ ಲಕ್ಷ್ಯ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವಪ್ರಾಯವು ಬದುಕಿನ ಅತ್ಯಂತ ಮಹತ್ವದ ಗಳಿಗೆಯಾಗಿದ್ದು, ಈ ಅಮೃತ ಗಳಿಗೆಯನ್ನು ಸದುಪಯೋಗ ಪಡಿಸಿಕೊಂಡವನು ಉತ್ತಮ ಬದುಕು ರೂಪಿಸಬಲ್ಲನು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆಎಲ್ಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಕೆಎಲ್ಎಸ್ ಆಡಳಿತ ಮಂಡಳಿಯು ಅತ್ಯುತ್ತಮ ಶೈಕ್ಷಣಿಕ ವಾತಾವರಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡಿ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.
2023-26ನೇ ಸಾಲಿನ ಬಿಸಿಎ ವಿದ್ಯಾರ್ಥಿಗಳಾದ ಅಂಕಿತಾ ಮಿಶಾಳೆ ಶೇ. 95.6 ಪ್ರಥಮ, ಮೊನಿಕಾ ಹುತಗಿ ಶೇ. 93.7 ದ್ವಿತೀಯ, ಅಯಾನ್ ಬಾಳೆಕುಂದ್ರಿ ಶೇ.93.2 ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ₹12000, ₹10000, ₹8000 ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಸಂಯೋಜಕಿ ಸಂಗೀತಾ ಪ್ರಭು ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಶಾಂತಾರಾಮ ಚಿಬುಲಕರ ಸಾಧಕರ ಯಾದಿಯನ್ನು ಮಂಡಿಸಿದರು. ಸಹಾಯಕ ಪ್ರಾಧ್ಯಾಪಕಿ ಅನುಷಾ ನಾಯ್ಕವಾಡ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು, ವಿದ್ಯಾರ್ಥಿಗಳಾದ ಶಾಹಿದ್ ಬಿಡಿವಾಲೆ ಮತ್ತು ತೆಹಮಿನಾ ಶೇಖ್, ರಾಧಿಕಾ ಹುಲಕೊಪ್ಪ ಹಾಗೂ ತುಳಸಿ ಸ್ವಾಧಿ ಕಾರ್ಯಕ್ರಮ ನಿರ್ವಹಿಸಿದರು.