ಚನ್ನಪಟ್ಟಣ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-೨೦೨೬ರ ಅಂಗವಾಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಚನ್ನಪಟ್ಟಣ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-೨೦೨೬ರ ಅಂಗವಾಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶ್ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳು, ಕಾನೂನಿನ ಮಹತ್ವ, ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಗತ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಸಮಾಜದ ಆಗುಹೋಗುಗಳನ್ನು ಅರ್ಥಮಾಡಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ತಹಸೀಲ್ದಾರ್ ನಯನಾ ಮಾತನಾಡಿ, ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸುವುದು, ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಮುಖ್ಯ. ಇಂತಹ ಯುವ ಸಂಸತ್ತು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಾಮಾಜಿಕ ಕಳಕಳಿ ಮತ್ತು ಆಡಳಿತಾತ್ಮಕ ತಿಳಿವಳಿಕೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಯುವ ಸಂಸತ್ ಕಲಾಪವು ಸಭಿಕರ ಗಮನ ಸೆಳೆಯಿತು. ವಿದ್ಯಾರ್ಥಿಗಳೇ ಮುಖ್ಯಮಂತ್ರಿ, ಸಭಾಪತಿ, ರಾಜ್ಯಪಾಲರು ಹಾಗೂ ವಿವಿಧ ಖಾತೆಗಳ ಸಚಿವರ ಪಾತ್ರಗಳನ್ನು ನಿರ್ವಹಿಸಿ, ನೈಜ ವಿಧಾನಸಭೆಯ ಕಲಾಪವನ್ನೇ ಕಣ್ಮುಂದೆ ತಂದರು.
ತಾಲೂಕಿನ ಸ್ಥಳೀಯ ಸಮಸ್ಯೆಗಳು, ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ, ಸ್ವಚ್ಛತೆ, ನಿರುದ್ಯೋಗ, ಮಹಿಳಾ ಸುರಕ್ಷತೆ ಸೇರಿದಂತೆ ಸಾರ್ವಜನಿಕ ಬದುಕಿಗೆ ಸಂಬಂಧಿಸಿದ ಹತ್ತು ಹಲವು ವಿಷಯಗಳನ್ನು ವಿದ್ಯಾರ್ಥಿಗಳು ಸದನದಲ್ಲಿ ಪ್ರಸ್ತಾಪಿಸಿದರು. ವಿರೋಧ ಪಕ್ಷದ ಸದಸ್ಯರಾಗಿ ಕುಳಿತಿದ್ದ ವಿದ್ಯಾರ್ಥಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸುರಿಮಳೆಗೈದರೆ, ಆಡಳಿತ ಪಕ್ಷದ ಸಚಿವರಾಗಿ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಗಳು ಸಮರ್ಥ ಉತ್ತರಗಳನ್ನು ನೀಡಿದರು.
ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆ, ಚರ್ಚೆ, ವಾದ-ಪ್ರತಿವಾದ, ಆಡಳಿತ ಪಕ್ಷದ ಸಮರ್ಥನೆ, ವಿರೋಧ ಪಕ್ಷದ ಟೀಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಕ್ರಿಯೆಗಳು ಅಚ್ಚುಕಟ್ಟಾಗಿ ಮೂಡಿಬಂದವು. ಸಭಾಪತಿಯ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಯು ಸದನದ ಶಿಸ್ತು ಕಾಪಾಡುತ್ತಾ ಕಲಾಪವನ್ನು ಮುನ್ನಡೆಸಿದ ರೀತಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಯಾವುದೇ ನೈಜ ವಿಧಾನಸಭೆಯ ಕಲಾಪವನ್ನು ವೀಕ್ಷಿಸುತ್ತಿದ್ದೇವೆಯೇನೋ ಎಂಬ ಭಾವನೆ ಸಭಿಕರಲ್ಲಿ ಮೂಡುವಂತೆ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮಾತನಾಡಿ, ವಿಷಯ ಮಂಡಿಸಿ, ಪರಸ್ಪರ ಪ್ರಶ್ನಿಸಿ, ಉತ್ತರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮಕ್ಕಳಲ್ಲಿ ಅಡಗಿರುವ ನಾಯಕತ್ವ, ವಾಕ್ಚಾತುರ್ಯ, ತಾರ್ಕಿಕ ಚಿಂತನೆ ಹಾಗೂ ಸಾಮಾಜಿಕ ಕಳಕಳಿಗೆ ಈ ವೇದಿಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಯ್ಯ ಆರ್. ಕೊರವಿನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಗಿರೀಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಷಾ ಮಾಲಿನಿ, ಪ್ರಾಧ್ಯಾಪಕಿ ಡಾ. ಚನ್ನಮ್ಮ, ಕ್ಷೇತ್ರ ಸಮನ್ವಯಾಧಿಕಾರಿ ಸಿ. ರಾಜಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಧೀಂದ್ರ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಯ್ಯ, ಶಿಕ್ಷಣ ಸಂಯೋಜಕ ಸುರೇಂದ್ರ, ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ, ಸಮಾಜ ಕಲ್ಯಾಣ ಇಲಾಖೆಯ ಅಶೋಕ್, ರಮೇಶ್ ಇತರರಿರು.
ಪೊಟೋ೬ಸಿಪಿಟಿ೧:
ಚನ್ನಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-೨೦೨೬ರ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.