ಗದಗ: ಯುವಕರು ಕ್ರೀಡೆಯಲ್ಲಿ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕ ಸಂಪತ್ತನ್ನು ಗಳಿಸಿದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಹೊಂದುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ. ಮನುಷ್ಯನಿಗೆ ಆರೋಗ್ಯ ಸಂಪತ್ತು ಬಹಳ ಮುಖ್ಯ, ಪ್ರತಿಯೊಬ್ಬರು ಪ್ರತಿ ದಿನ ದೈಹಿಕ ವ್ಯಾಯಾಮದಲ್ಲಿ ಪಾಲ್ಗೋಳಬೇಕು. ನಮ್ಮ ದೇಶದ ಹೆಮ್ಮೆಯಾದ ಯೋಗವು ಇಂದು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದು ಜೂ. 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸಿ ಯೋಗದ ಮಹತ್ವ ಪ್ರಚುರಪಡಿಸಲಾಗುತ್ತಿದೆ. ಹಾಗಾಗಿ ನಾವು ದಿನನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಮಾಡಿ ಸದೃಢವಾಗಿರಬೇಕು ಎಂದರು.
ಸರ್ಕಾರ ಕ್ರೀಡೆಗೆ ಮಹತ್ವ ನೀಡಿ ದಸರಾ ಕ್ರೀಡಾಕೂಟ ಆಯೋಜಿಸಿದೆ. ಗೆಲವು ಸೋಲಿನ ಬಗ್ಗೆ ಯೋಚನೆ ಮಾಡದೆ ಭಾಗವಹಿಸುವಿಕೆಗೆ ಮಹತ್ವ ನೀಡಿ ಸೋಲು ಗೆಲವನ್ನು ಕ್ರೀಡಾ ಮನೋಭಾವದಿಂದ ಸಮಾನವಾಗಿ ತೆಗೆದುಕೊಳ್ಳಬೇಕು ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೊಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು, ತಾಲೂಕು ಮಟ್ಟದಲ್ಲಿ ವಿಜಯ ಸಾಧಿಸಿ ನಂತರದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮುಕ್ತವಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೇಮನಿ, ಕೆ.ಎಸ್.ಪಲ್ಲೇದ, ವೈ.ಕೆ.ಚೌಡಾಪುರ, ರಾಜು ಚವ್ಹಾಣ ಸೇರಿದಂತೆ ದೈಹಿಕ ಶಿಕ್ಷಕರು, ಶಾಲಾ ಮಕ್ಕಳು ಇದ್ದರು. ಶೋಭಾ ಮತ್ತು ತಂಡದವರು ಗೀತೆ ಪ್ರಸ್ತುತ ಪಡಿಸಿದರು. ಎಂ.ಎಸ್.ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಎಫ್.ಎಂ. ಮುಶೇಣ್ಣನವರ ವಂದಿಸಿದರು.