ಭಾರತ ಬದಲಾವಣೆಯಲ್ಲಿ ಯುವಶಕ್ತಿ ಪ್ರೇರಣೆ

KannadaprabhaNewsNetwork |  
Published : Jul 06, 2025, 11:49 PM IST
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಾ. ಜಿ. ಪರಮೇಶ್ವರ್ | Kannada Prabha

ಸಾರಾಂಶ

ಜಗತ್ತಿನ ದೇಶಗಳಗಿಂತ ವೇಗವಾಗಿ ಭಾರತ ಬದಲಾವಣೆಯಾಗುತ್ತಿದೆ. ದೇಶದ ಈ ಬದಲಾವಣೆ ಹಿಂದೆ ಯುವ ಶಕ್ತಿ ಇದೆ. ಯುವಶಕ್ತಿಗೆ ಶಕ್ತಿ ತುಂಬುವ ಶಿಕ್ಷಣ ಕಾರಣವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು ಜಗತ್ತಿನ ದೇಶಗಳಗಿಂತ ವೇಗವಾಗಿ ಭಾರತ ಬದಲಾವಣೆಯಾಗುತ್ತಿದೆ. ದೇಶದ ಈ ಬದಲಾವಣೆ ಹಿಂದೆ ಯುವ ಶಕ್ತಿ ಇದೆ. ಯುವಶಕ್ತಿಗೆ ಶಕ್ತಿ ತುಂಬುವ ಶಿಕ್ಷಣ ಕಾರಣವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು. ರಾಜ್ಯ ಸರ್ಕಾರಿ ನೌಕರರ ಸಂಘದಜಿಲ್ಲಾ ಸಂಘ ಭಾನುವಾರ ನಗರದ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನೌಕರರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.ಇಂದು ಭಾರತದಲ್ಲಿ ಡಿಜಿಟಲ್‌ ಕ್ರಾಂತಿ ನಡೆದಿದೆ. ಜಗತ್ತಿನ ಯಾವುದೇ ದೇಶದ ಜನರಿಗಿಂತ ನಮ್ಮ ದೇಶದ ಹೆಚ್ಚು ಜನ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ. ಹಳ್ಳಿಹಳ್ಳಿಗಳಲ್ಲೂ ಡಿಜಿಟಲ್‌ ಕ್ರಾಂತಿ ಕಂಡಿದೆ. ದೇಶದ 140 ಕೋಟಿ ಜನರಲ್ಲಿ ಸುಮಾರು 96 ಕೋಟಿಜನ ವಿವಿಧ ರೂಪಗಳಲ್ಲಿ ಇಂಟರ್‌ನೆಟ್‌ನಲ್ಲಿ ವ್ಯವಹಾರ ಚಟುವಟಿಕೆ ಮಾಡುತ್ತಿದ್ದಾರೆ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು, ವಿಶೇಷವಾಗಿ ವಿದ್ಯಾರ್ಥಿಗಳು ಬದಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.ಭವಿಷ್ಯ ಭಾರತ ಕಟ್ಟುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಮಾನವ ತಂತ್ರಜ್ಞಾನವನ್ನು ಉತ್ಪಾದಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದ ಸ್ಪರ್ಧೆಗಳನ್ನು ಎದುರಿಸಲು ನಮ್ಮ ಮಕ್ಕಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಸಚಿವ ಡಾ.ಪರಮೇಶ್ ಹೇಳಿದರು. ಕೇಂದ್ರ ಜಲಶಕ್ತಿ ಹಾಗೂ ರೈಲ್ವೆಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನೌಕರರು ಸರ್ಕಾರದ ಯಶಸ್ಸಿನಲ್ಲಿ ಭಾಗಿಯಾಗಿ ದೇಶದ ಅಭಿವೃದ್ಧಿಗೂ ಕೊಡುಗೆಯಾಗಿದ್ದಾರೆ. ನೌಕರರು ರಾಜ್ಯದ ಅಭಿವೃದ್ಧಿಯ ಸಂಕೇತ. ಆದರೆ ತಮ್ಮ ಕರ್ತವ್ಯದಲ್ಲಿ ಲೋಪವಾಗದಂತೆ ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ತಿಳಿಸಿದರು.ಸರ್ಕಾರಿ ನೌಕರರ ಸಂಘದವರು ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಮಾದರಿ ಪದ್ದತಿ ಅನುಸರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚುಹೆಚ್ಚು ಪ್ರೋತ್ಸಾಹ ದೊರೆತು ಅವರೂ ಸಾಧನೆ ಮಾಡಲಿ. ಜಿಲ್ಲಾಡಳಿತ ನಗರದಲ್ಲಿ ಐಎಎಸ್, ಐಪಿಎಸ್ ಪರೀಕ್ಷೆಗಳ ತರಬೇತಿ ಕೇಂದ್ರ ತೆರೆದರೆ ಬಡ ಪ್ರತಿಭಾವಂತ ಮಕ್ಕಳಿಗೂ ಮಾರ್ಗದರ್ಶನ ದೊರೆಯುತ್ತದೆ.ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದರು. ರೈಲ್ವೆಇಲಾಖೆಯ ಉದ್ಯೋಗ ಪ್ರವೇಶ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ನಮ್ಮ ರಾಜ್ಯದ ಮಕ್ಕಳು ಇಂತಹ ಪರೀಕ್ಷೆಗಳನ್ನು ಎದುರಿಸಿ ರೈಲ್ವೆಇಲಾಖೆಯಲ್ಲಿ ಉದ್ಯೋಗ ಪಡೆದು ಸೇವೆ ಸಲ್ಲಿಸಲಿ ಎಂದು ಆಶಿಸಿದ ಸಚಿವ ಸೋಮಣ್ಣ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ತಿರುವಿನ ಘಟ್ಟಗಳು.ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ತಾವು ಏನಾಗಬೇಕು ಎಂದು ಬಯಸುವಿರೋ ಆ ಕ್ಷೇತ್ರವನ್ನುಆಯ್ಕೆ ಮಾಡಿಕೊಂಡು ಯಶಸ್ವಿಯಾಗಿರಿ ಎಂದು ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಂಘದಿಂದ ಆರು ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ಇನ್ನೆಲ್ಲಿಯೂ ಈ ಪ್ರಮಾಣದಲ್ಲಿ ಪ್ರತಿಭಾ ಪುರಸ್ಕಾರ ಮಾಡುತ್ತಿಲ್ಲ. ಈ ಮೂಲಕ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವುದಲ್ಲದೆ, ಇತರ ಮಕ್ಕಳಿಗೂ ಪ್ರೇರಣೆಯಾಗಲಿ ಎಂಬ ಆಶಯ ಎಂದರು.ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಪಂಚಾಯ್ತಿ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕೆ.ಎ.ಅಶೋಕ್‌, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್‌ಜಮ್, ತಹಶೀಲ್ದಾರ್ ರಾಜೇಶ್ವರಿ ಅತಿಥಿಗಳಾಗಿ ಭಾಗವಹಿಸಿದ್ದರು.ಈ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಕಡ 90 ರಷ್ಟು ಅಂಕ ಪಡೆದ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ 257 ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ವಿತರಿಸಿ ಅಭಿನಂದಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು, ಮಧುಗಿರಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ರಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ಎನ್.ರಾಧಾಕೃಷ್ಣ, ಸಹಕಾರ್ಯದರ್ಶಿ ಸಿದ್ದರಾಜು, ರಾಜ್ಯ ಗೌರವಾಧ್ಯಕ್ಷ ಎನ್.ಬಸವರಾಜು, ಖಜಾಂಚಿ ಶಿವರುದ್ರಯ್ಯ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

PREV