ಪ್ರಸಾದ್ ನಗರೆ
ಇನ್ನು ಶರಾವತಿ ಸ್ಟೋರೇಜ್ ನಿಂದ ಆಗುವ ಅನಾಹುತವನ್ನು ತಪ್ಪಿಸಲು ಮತ್ತು ಜನರಲ್ಲಿ ಜಾಗೃತಿಯನ್ನು ಮೂಡಿಸಲು ಯುವಕರು ಮುಂದಾಗಿರುವುದು ಪಂಪ್ಡ್ ಸ್ಟೋರೇಜ್ ಬೇಡ ಎನ್ನುವ ಗುಂಪಿಗೆ ಬಲ ಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಯೋಜನೆಯ ವಿರುದ್ಧ ವಿಡಿಯೋಗಳನ್ನು ಹಾಗೂ ಪೋಸ್ಟರ್ ಗಳನ್ನು ಹರಿಬಿಡಲಾಗುತ್ತಿದೆ. ಅಲ್ಲದೆ, ಯುವ ಸಮುದಾಯದವರು ಸೇರಿದರೆ ಮಾತ್ರ ಇಂತಹ ಪರಿಸರ ನಾಶದ ಯೋಜನೆಯನ್ನು ಓಡಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಈಗಲೇ ಪರಿಸರದ ಅಸಮತೋಲನ ಉಂಟಾಗಿ ಆಗುತ್ತಿರುವ ಪರಿಣಾಮಗಳನ್ನು ಅರಿತಿಕೊಂಡಿರುವ ಯುವ ಸಮುದಾಯ ಈ ಯೋಜನೆಯು ಭವಿಷ್ಯದಲ್ಲಿ ನಮಗೆ ದೊಡ್ಡ ಅಪಾಯ ತರುತ್ತದೆ ಎಂಬುದನ್ನು ಜನಸಾಮಾನ್ಯರಿಗೂ ಅರ್ಥ ಮಾಡಲು ಹೊರಟಿರುವುದು ತಾಲೂಕಿನಲ್ಲಿ ಶ್ಲಾಘನೆಗೆ ಕಾರಣವಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ತಾಲೂಕಿನ ರೈತರಿಗೆ ಹೆಚ್ಚು ತೊಂದರೆ ಆಗುತ್ತದೆ. ಜೀವನದಿಯಾಗಿರುವ ಶರಾವತಿಯ ಒಡಲನ್ನು ಮತ್ತೆ ಸಿಗಿದು ಅದರಲ್ಲಿ ಪೈಪ್ ಮೂಲಕ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎನ್ನುವಂತಹ ಯೋಜನೆಯ ಬದಲು ತೋಟಗಳಿಗೆ, ಗದ್ದೆಗೆ ನೀರನ್ನು ಹರಿಸಲು ಬೇಕಾದ ಯೋಜನೆಯನ್ನು ತಂದರೆ ಒಳ್ಳೆಯದಿತ್ತು ಎನ್ನುವುದು ಸ್ಥಳೀಯ ರೈತರ ಅಭಿಮತ.ಶರಾವತಿ ನದಿಯ ಎಡ ಹಾಗೂ ಬಲದಂಡೆಯ ಜನಕ್ಕೆ ಮುಂದಿನ ದಿನಗಳಲ್ಲಿ ಕುಡಿಯಲು ನೀರಿನ ತತ್ವಾರ ಜಾಸ್ತಿಯಾದರೂ ಆಶ್ಚರ್ಯವಿಲ್ಲ. ಈ ಯೋಜನೆ ಸುಮಾರು ೬ ವರ್ಷಗಳ ಕಾಲ ನಿರ್ಮಾಣ ಕಾರ‍್ಯಕ್ಕೆ ಬೇಕಾಗುತ್ತದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಾಂತ್ರಿಕ ಸಿಬ್ಬಂದಿ, ಕೂಲಿ ಕಾರ್ಮಿಕರು ಮತ್ತವರ ಕುಟುಂಬದ ಸಂಖ್ಯೆ ಸೇರಿ ೩೭೦೦ರನ್ನು ಮೀರಲಿದೆ ಎಂದು ಹೇಳಲಾಗುತ್ತಿದೆ.
ಪರಿಸರ ನಾಶದ ಜೊತೆ ನಮ್ಮ ಮುಂದಿನ ಜನಾಂಗಕ್ಕೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಯುವ ಜನತೆ ಅರ್ಥ ಮಾಡಿಕೊಂಡಿರುವುದು ಈ ಯೋಜನೆಯನ್ನು ನಿಲ್ಲಿಸಬೇಕು ಎನ್ನುವ ಹೋರಾಟಕ್ಕೆ ಬಲ ಬಂದಿದ್ದಂತೂ ಸುಳ್ಳಲ್ಲ.ಈ ಯೋಜನೆಯಿಂದ ಪಶ್ಚಿಮ ಘಟ್ಟದ ಸುಮಾರು ೧೬ ಸಾವಿರ ಮರಗಳು ಧರಾಶಾಯಿಯಾಗಲಿವೆ. ಇದಕ್ಕೆ ಪರ್ಯಾಯ ಏನು ಎಂಬುದಕ್ಕೆ ಸರಿಯಾದ ಉತ್ತರವಿಲ್ಲ. ತಾಲೂಕಿನ ಯುವ ಸಮುದಾಯ ಪ್ರತಿ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಹುಟ್ಟುಹಾಕುತ್ತಿರುವುದು ಶ್ಲಾಘನೀಯವಾಗಿದೆ.
ಇದೇ ಸೆ.೧೮ರಂದು ಗೇರುಸೊಪ್ಪದಲ್ಲಿ ನಡೆಯುವ ಶರಾವತಿ ಸ್ಟೋರೇಜ್ ಯೋಜನೆ ಕುರಿತಾದ ಅಹವಾಲು ಸಭೆಯಲ್ಲಿ ಬಿಸಿಬಿಸಿ ಚರ್ಚೆಯಾಗುವುದನ್ನು ನಿರೀಕ್ಷಿಸಬಹುದು.