ಗದಗ: ಕ್ರೀಡೆಗಳಲ್ಲಿ ಹೆಚ್ಚು ಪ್ರತಿಭೆಗಳಿರುವ ಜಿಲ್ಲೆ ನಮ್ಮದಾಗಿದೆ. ಇದು ನಮ್ಮ ಹೆಮ್ಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಯುವಕರು ಕ್ರೀಡಾ ಮನೋಭಾವ ಅಳವಡಿಸಿಕೊಂಡರೆ ಆರೋಗ್ಯ ಮಾತ್ರವಲ್ಲ, ಮಾನಸಿಕ ಸದೃಢತೆ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ. ಇಂತಹ ಯುವ ಶಕ್ತಿಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ಕ್ರೀಡೆ ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ. ಸೋಲಿನಲ್ಲಿ ಕಲಿಯುವ ನೈತಿಕತೆ, ಗೆಲುವಿನಲ್ಲಿ ಸಹ ವಿನಮ್ರತೆ ಇರಬೇಕೆಂಬ ಗುಣ ಕ್ರೀಡೆಯಿಂದಲೇ ಬರುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಲ್ಲಿ ಮಾತ್ರವಲ್ಲ ಕ್ರೀಡಾಂಗಣದಲ್ಲೂ ಸಮರ್ಥರಾಗಬೇಕು. ನಿಜವಾದ ಶಿಕ್ಷಣ ಶರೀರ, ಮನಸ್ಸು ಹಾಗೂ ಆತ್ಮದ ಸಮತೋಲನದಲ್ಲಿದೆ ಎಂದು ತಿಳಿಸಿದರು.ಗದಗ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡೆ ಮತ್ತು ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿಯೂ ಜಿಲ್ಲೆ ಮುಂಚೂಣಿಯಲ್ಲಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಕಡೇಮನಿ, ಯೋಗೇಶ್ ಕುಮಾರ, ಎಸ್.ಪಿ. ರೋಹನ್ ಜಗದೀಶ್, ಎಡಿಸಿ ಡಾ. ದುರಗೇಶ್ ಕೆ.ಆರ್., ಗಂಗಪ್ಪ ಎಂ, ಸಿದ್ದಲಿಂಗ ಮಸನಾಯಕ, ಶರಣು ಗೊಗೇರಿ, ಕೊಟ್ರೇಶ್ ವಿಭೂತಿ, ಕೊಟ್ರೇಶ್ ಮೆಣಸಿನಕಾಯಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಕರು, ನಿರ್ಣಾಯಕರು, ವಿದ್ಯಾರ್ಥಿಗಳು ಇದ್ದರು.