ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಮಲ್ನಾಡ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಭಾರತದಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲದಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸುವಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಅವರು ಹೇಳಿದರು. ಜಿಡಿಪಿ ಏರಿಕೆಯಾಗುತ್ತಿದೆ ಎನ್ನಲಾಗುತ್ತಿದ್ದರೂ ಅದರ ಲಾಭ ಕೆಲವೇ ಬಂಡವಾಳಶಾಹಿಗಳಿಗೆ ಸೀಮಿತವಾಗಿದ್ದು, ನೆಲಮಟ್ಟದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಯುವಕರು ನಿರಂತರ ಪರಿಶ್ರಮದ ಮೂಲಕ ತಮ್ಮ ಪ್ರತಿಭೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನ ಹಾಗೂ ಕೌಶಲ್ಯವನ್ನು ಬೆಳೆಸಿಕೊಂಡರೆ ತಮ್ಮ ಜೀವನದ ಜೊತೆಗೆ ದೇಶದ ಆರ್ಥಿಕತೆಯನ್ನೂ ಬಲಪಡಿಸಬಹುದು ಎಂದು ತಿಳಿಸಿದರು. ಮಲ್ನಾಡ್ ಎಜುಕೇಶನಲ್ ಟ್ರಸ್ಟ್ ನಡೆಸುತ್ತಿರುವ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ರಾಜ್ಯಕ್ಕೆ ಮಾದರಿಯಾಗಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಮನೋವೈದ್ಯ ಡಾ. ಆಫ್ತಾಬ್ ಮಾಲ್ದಾರ್, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಾಧನೆಯ ನಂತರವೂ ನಿರಂತರ ಪರಿಶ್ರಮವನ್ನು ಮುಂದುವರಿಸಬೇಕು. ಯಶಸ್ಸಿನೊಂದಿಗೆ ವಿನಯಶೀಲತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಸಾಮಾಜಿಕ ಜಾಲತಾಣಗಳ ಅನಗತ್ಯ ಬಳಕೆಯಿಂದ ದೂರವಿದ್ದು ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸದತ್ತ ಗಮನಹರಿಸಬೇಕು ಎಂದರು.
ಟ್ರಸ್ಟ್ ಆಡಳಿತಾಧಿಕಾರಿ ಏಜಾಜ್ ಅಹ್ಮದ್ ಸಂಸ್ಥೆಯ ಉದ್ದೇಶಗಳು ಮತ್ತು ಕಾರ್ಯಚಟುವಟಿಕೆಗಳ ಕುರಿತು ವಿವರಿಸಿ, ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಒದಗಿಸುವುದು ಟ್ರಸ್ಟ್‌ನ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪಿಯುಸಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಏಳು ವಿದ್ಯಾರ್ಥಿಗಳು ಮತ್ತು ಎಸ್ಸೆಸ್ಸೆಲ್ಸಿ ಐದು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಜೊತೆಗೆ 15 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.