- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜಾಗತೀತಕರಣ ಭರಾಟೆಯಲ್ಲಿ ಮುಂದೆ ಸಾಗುತ್ತಿರುವ ಯುವ ಜನರು ಪಾರಂಪರಿಕ ಐತಿಹಾಸಕ ಕಟ್ಟಡ, ಸ್ಮಾರಕಗಳ ಬಗ್ಗೆಯೂ ತಿಳಿದುಕೊಂಡಿರಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಧನಂಜಯ ಮೇಧೂರ ಸಲಹೆ ನೀಡಿದರು.
ಗುರುವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಯಲ್ಲಿ ನಡೆದ ತಾಲೂಕಿನ ಪ್ರೌಢ ಶಾಲೆಗಳ ಮಕ್ಕಳಿಗಾಗಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ನಮ್ಮ ದೇಶದಲ್ಲಿ ಪಾರಂಪಾರಿಕವಾಗಿ ಸಾಗಿ ಬಂದ ಜಾನಪದ ಸ್ಮಾರಕಗಳು, ಐತಿಹಾಸಿಕ ಕಟ್ಟಡಗಳ ಪರಿಚಯ ವಾಗಲಿದೆ.ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಅನುಕೂಲ ವಾಗಲಿದೆ.ಇಂದಿನ ಮಕ್ಕಳು ಆಧುನಿಕ ಬದುಕಿಗೆ ಮಾತ್ರ ಒತ್ತು ನೀಡದೆ ನಮ್ಮ ಪೂರ್ವಿಕರು ನಡೆದು ಬಂದ ದಾರಿ, ಅವರ ಜೀವನದ ಇತಿಹಾಸ, ಅವರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಕ್ಕೂ, ನಮ್ಮ ಕಾಲದ ಲ್ಲಿರುವ ನಾಣ್ಯಕ್ಕೂ ಇರುವ ವ್ಯತ್ಯಾಸ ಅರಿಯಬೇಕು. ಹರಪ್ಪ ನಾಗರಿಕತೆಯಿಂದ ಇಂದಿನವರೆಗೆ ಭಾರತದಲ್ಲಿ ಆದ ಬದಲಾವಣೆ, ಹೊಸ ಅವಿಷ್ಕಾರ, ಕಟ್ಟಡದ ವೈಶಿಷ್ಟ್ಯಗಳನ್ನು ಮಕ್ಕಳು ತಿಳಿದು ಕೊಳ್ಳಬೇಕು. ಆದಿ ಮಾನವರು ಕಲ್ಲಿನ ಆಯುಧಗಳನ್ನು ಬಳಸುತ್ತಿದ್ದರು ಎಂದರು.ಭಾರತ ದೇಶದಲ್ಲಿರುವ ಪಾರಂಪಾರಿಕ ಸ್ಥಳಗಳ ಪರಿಚಯ ಇದ್ದರೆ ನಾವೊಬ್ಬ ಇತಿಹಾಸ ಅರಿತ ಮಗುವಾಗಲು ಸಾಧ್ಯ ಎಂದು ಮಕ್ಕಳಿಗೆ ಕರೆ ನೀಡಿದರು. ಶಿಕ್ಷಣ ಸಂಯೋಜಕ ಬಿ.ಕೆ.ರಂಗಪ್ಪ ಮಾತನಾಡಿ, 2014-15 ರಿಂದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ ಪ್ರಾರಂಭವಾಗಿದೆ. ಸರ್ಕಾರಿ ಪ್ರೌಢ ಶಾಲೆ ಹಾಗೂ ಅನುದಾನಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ,ಭಾಷಣ, ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗುತ್ತದೆ.ತಾಲೂಕು ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಾಲೂಕಿನ 14 ಪ್ರೌಢ ಶಾಲೆ ಮಕ್ಕಳು ಇಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಪುರಾತನ ಕಾಲದ ದೇವಸ್ಥಾನ, ಪ್ರಾಚೀನ ವಸ್ತುಗಳು, ಐತಿಹಾಸಕ ಕಟ್ಟಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದೇ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯಿತು. ವಿಜೇತ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಅತಿಥಿಗಳಾಗಿ ಶಿಕ್ಷಣ ಇಲಾಖೆ ಬಿಐಇಆರ್‌ಟಿ ವಿಜಯಕುಮಾರ್, ತಾಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ,ಶಿಕ್ಷಣ ಸಂಯೋಜಕಿ ಸಂಗೀತ, ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್, ಕಿತ್ತೂರು ರಾಣಿ ವಸತಿ ಶಾಲೆ ಪ್ರಭಾರಿ ಪ್ರಾಂಶುಪಾಲ ವಿಶ್ವನಾಥ, ವೀರೇಶ್, ಎಚ್.ಎಸ್.ನಾಗರಾಜ್ , ಭಾಗ್ಯ , ಸುಹಾಸಿನಿಇದ್ದರು.