ಕೊಪ್ಪಳ: ಯುವಜನರು ಮೊಬೈಲ್ ಬಳಕೆಗೆ ಸೀಮಿತವಾಗದೆ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಮೂಲಕ ಹೊಸ ತಲೆಮಾರಿನ ಸಾಹಿತಿಗಳನ್ನು ರೂಪಿಸಬೇಕು ಎಂದು ಡಾ. ಪಿ.ಎಂ. ಬಸವರಾಜ್ ಹೇಳಿದರು.
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯುವ ಸಮುದಾಯದ ಕೊರತೆ ಎದ್ದು ಕಾಣುತ್ತಿದೆ. ಯುವಕರನ್ನು ಸಾಹಿತ್ಯದತ್ತ ಆಕರ್ಷಿಸಲು ಪರಿಷತ್ತಿನ ಪದಾಧಿಕಾರಿಗಳು ಹೊಸ ಯೋಜನೆಗಳನ್ನು ರೂಪಿಸಬೇಕು. ಯುವಕರಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದರ ಜತೆಗೆ ಅವರಲ್ಲಿರುವ ಸೃಜನಶೀಲ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಹೊಸ ತಲೆಮಾರಿನ ಸಾಹಿತಿಗಳ ಬೆಳವಣಿಗೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಶಂಕರಗೌಡ ಪೊಲೀಸಪಾಟೀಲ್ ಮಾತನಾಡಿ, ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕವಿಗೋಷ್ಠಿ, ಕವಿ ಸಮ್ಮೇಳನ ಸೇರಿದಂತೆ ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕು ಎಂದರು.ಹಿರಿಯ ಪತ್ರಕರ್ತ ಶರಣಪ್ಪ ಬಚಾಲಾಪುರ ಮಾತನಾಡಿ, ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ತಮ್ಮ ಗುಂಪಿನಿಂದ ಬಸವರಾಜ ಬಿನ್ನಾಳ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಸ್ವತಃ ಸಾಹಿತಿಯಾಗಿರುವ ಬಿನ್ನಾಳ ಅವರಿಗೆ ಸದಸ್ಯರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಆಜೀವ ಸದಸ್ಯರಾದ ರಮೇಶ ತುಪ್ಪದ, ಬಸವರಾಜ ಶಿವಸಿಂಪರ್, ಕಳಕಪ್ಪ ಕುಂಬಾರ, ಮಹೇಶಗೌಡ ಭಾನಪುರ, ಮಲ್ಲಿಕಾರ್ಜುನ ಗುಡಿಗೇರಿ, ಶರಣಪ್ಪ ಹ್ಯಾಟಿ, ಯಮನೂರಪ್ಪ ಗಂಟಿ, ಬಸವರಾಜ ಗದ್ದಿ, ತಿರುಪತಪ್ಪ ಹೊಸೂರು, ಶಿಲ್ಪಾ ಗಣಾಚಾರಿ, ಪ್ರಕಾಶ ಸಜ್ಜನ, ಈರಣ್ಣ ಅಂಗಡಿ, ಹನುಮಂತಪ್ಪ, ಪುಟ್ಟಪ್ಪ ವಾರದ, ಮಲ್ಲಪ್ಪ ಕೋಮಲಾಪುರ, ಕಳಕೇಶ ಇತ್ತಿನಮನಿ, ದೇವರಾಜ ಹಡಪದ, ವೆಂಕೋಬ ಇಂದರಗಿ, ದೇವರಾಜ ಮಾಸ್ಟರ್ ಹಲಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.