ಯುವಕರು ಬೂತ್‌ ಮಟ್ಟದಿಂದಲೇ ಸಂಘಟನೆ ನಡೆಸ್ಬೇಕು : ಡಿಕೆಶಿ

KannadaprabhaNewsNetwork |  
Published : Sep 08, 2025, 01:00 AM IST
KPCC | Kannada Prabha

ಸಾರಾಂಶ

ಬೂತ್‌ಮಟ್ಟದಲ್ಲಿ ಸಂಘಟನಾ ಶಕ್ತಿ ಸಾಬೀತು ಮಾಡಿದರೆ ಮಾತ್ರ ದೊಡ್ಡಮಟ್ಟದ ನಾಯಕರಾಗಿ ಬೆಳೆಯಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

  ಬೆಂಗಳೂರು :  ‘ಸಂಘಟನೆಯೇ ನಮ್ಮ ಶಕ್ತಿ. ಬೂತ್‌ಮಟ್ಟದಲ್ಲಿ ಸಂಘಟನಾ ಶಕ್ತಿ ಸಾಬೀತು ಮಾಡಿದರೆ ಮಾತ್ರ ದೊಡ್ಡಮಟ್ಟದ ನಾಯಕರಾಗಿ ಬೆಳೆಯಲು ಸಾಧ್ಯ. ಹೀಗಾಗಿ ಯುವ ಕಾಂಗ್ರೆಸ್ ನಾಯಕರು ಬೂತ್‌ಮಟ್ಟದಲ್ಲಿ ಸಂಘಟನೆಗೆ ಶ್ರಮಿಸಬೇಕು’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ (ಯುವ ಕಾಂಗ್ರೆಸ್‌) ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನಗೆ ಸಾತನೂರು ಕ್ಷೇತ್ರದಿಂದ ಟಿಕೆಟ್ ನೀಡಿದರು. ನನ್ನ ಸಂಘಟನೆಯ ಸಾಮರ್ಥ್ಯ ಅಷ್ಟು ಚೆನ್ನಾಗಿತ್ತು. ಯುವ ನಾಯಕನಾಗಿ ನಾನು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದರಿಂದ ಈ ರೀತಿ ನಾಯಕನಾಗಿ ಬೆಳೆದೆ. ಹೀಗಾಗಿ ಬೂತ್ ಮಟ್ಟದಲ್ಲಿ ನಾಯಕರಾಗಿ ಬೆಳೆದು ನಿಮ್ಮ ಸಾಮರ್ಥ್ಯ ‌ಪ್ರದರ್ಶಿಸಿದರೆ ಮಾತ್ರ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಯುವ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

ಚುನಾವಣೆಗೆ ಹಣ ಮುಖ್ಯವಲ್ಲ, ಸಂಘಟನಾ ಸಾಮರ್ಥ್ಯ ಮುಖ್ಯ. ನೀವು ನಾಯಕರುಗಳ ಹಿಂದೆ ಓಡಾಡಿದರೆ ಪ್ರಯೋಜನವಿಲ್ಲ. ನೀವೇ ನಾಯಕರಾಗಿ ಹೊರಹೊಮ್ಮಬೇಕು. ಯುವ ಕಾಂಗ್ರೆಸ್ ಸೇರಿ ಪಕ್ಷದ ಎಲ್ಲಾ ಘಟಕಗಳು ಕೆಲಸ ಮಾಡಿದರೆ ನಾವು 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದರು.

ಇದೇ ವೇಳೆ ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ನಾಯಕರಾಗಿ ಬೆಳೆದವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಇವರು ಪಕ್ಷದ ಆಸ್ತಿಯಾಗಿ, ದೇಶದ ಆಸ್ತಿಗಳಾಗಿ ಬೆಳೆಯುತ್ತಾರೆ ಎಂದು ಶಿವಕುಮಾರ್‌ ಕೊಂಡಾಡಿದರು.

ಜಿಬಿಎಯಿಂದ 500 ಹೊಸ ನಾಯಕರು ಸಜ್ಜು:

ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ನೂತನ ಐದು ಪಾಲಿಕೆಗಳನ್ನು ರಚಿಸಿದ ಕಾರಣಕ್ಕೆ ಸುಮಾರು 500ಕ್ಕೂ ಹೆಚ್ಚು ಹೊಸ ನಾಯಕರು ಸಜ್ಜಾಗಲಿದ್ದಾರೆ.‌ ನಾನೂ ಮೊದಲ ವಿಧಾನಸಭಾ ಚುನಾವಣೆ ಎದುರಿಸಿದ ನಂತರ ಜಿಪಂ ಸದಸ್ಯನಾಗಿ ಆಯ್ಕೆಯಾದೆ. ನಂತರ ಜನ ನನ್ನನ್ನು 8 ಬಾರಿ ಎಂಎಲ್ಎಯಾಗಿ ಆಯ್ಕೆ ಮಾಡಿದ್ದಾರೆ. ಎನ್ಎಸ್‌ಯುಐ ಅಧ್ಯಕ್ಷನಾಗಿದ್ದ ಕೀರ್ತಿ ಗಣೇಶ್‌ನನ್ನು ನಿಗಮ ಮಂಡಳಿ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಹೀಗಾಗಿ ಪಕ್ಷದ ಸೇವೆ ಮಾಡಿದರೆ ಅವಕಾಶಗಳಿವೆ ಎಂದು ಡಿ.ಕೆ.ಶಿವಕುಮಾರ್‌ ಸೂಚ್ಯವಾಗಿ ತಿಳಿಸಿದರು. ಈ ವೇಳೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಸೇರಿ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

ಮತಗಳ್ಳತನ ಬಗ್ಗೆ ವರದಿ

ನೀಡಿ: ಮಂಜುನಾಥ್‌ಗೌಡ

ದೇಶಾದ್ಯಂತ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಮತಗಳ್ಳತನ ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಹಾಗೂ ಯುವ ಕಾಂಗ್ರೆಸ್‌ ಸಮಿತಿಗಳು ಜಿಲ್ಲಾಮಟ್ಟದಲ್ಲಿ ಮತಪಟ್ಟಿ ಪರಿಶೀಲಿಸಿ ಮತಗಳ್ಳತನ ಬಗ್ಗೆ ವರದಿ ನೀಡಬೇಕು ಎಂದು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ