ರಾಜ್ಯ ಕಾಡುಗೊಲ್ಲರ ಯುವ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ । ಅರ್ಹರಿಗೆ ನೀಡಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಎಚ್ಚರಿಕೆ
ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಜನರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಕಾಡುಗೊಲ್ಲ ಜಾತಿ ದೃಢೀಕರಣ ಪತ್ರ ನೀಡಲು ಕಟ್ಟುನಿಟ್ಟಿನ ಆದೇಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ಕಾಡುಗೊಲ್ಲ ಯುವಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಸವಿತ ಅವರಿಗೆ ಆಗ್ರಹ ಪೂರ್ವಕ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆಯ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ, ಸರ್ಕಾರ ಕಾಡುಗೊಲ್ಲ ಸಮುದಾಯದ ಜನರಿಗೆ ಅವರ ದಾಖಲೆಗಳನ್ನು ಪರಿಶೀಲಿಸಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಹಲವಾರು ಸುತ್ತೋಲೆಗಳ ಮತ್ತು ಆದೇಶಗಳ ಮೂಲಕ ಸೂಚನೆ ನೀಡಿದ್ದರೂ ಇದುವರೆಗೂ ಸಮರ್ಪಕ ರೀತಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿಲ್ಲ. 2017 ಮತ್ತು 2018ರ ಆದೇಶ ಪತ್ರಗಳನ್ನೇ ಮುಂದಿಟ್ಟುಕೊಂಡು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸರ್ಟಿಪಿಕೇಟ್ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚನೆಗೊಳಿಸಿದ್ದು ಕಾಡುಗೊಲ್ಲ ಜಾತಿ ಪ್ರಮಾಣಪತ್ರವಿಲ್ಲದೆ ಅಭಿವೃದ್ಧಿ ನಿಗಮದ ಯೋಜನೆ, ಸಹಾಯಧನಗಳನ್ನು ಸಮುದಾಯದ ಜನತೆ ಪಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದ ಅವರು, ಸರ್ಕಾರವೇ ಅಧಿಕಾರಿಗಳು ಕಾಡುಗೊಲ್ಲ ಜಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕೇವಲ ಶಾಲಾ ದಾಖಲಾತಿಗೆ ಮಾತ್ರ ಜೋತು ಬೀಳದೆ, ಸ್ಥಳಿಯ ನಿವಾಸಿಗಳಿಂದ ದೃಢೀಕರಣ ಪಡೆದು, ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಈ ಕಾರ್ಯ ನಡೆಯುತ್ತಿಲ್ಲ. ಜಿಲ್ಲಾಧಿಕಾರಿ ಮುಂದಿನ ಒಂದು ತಿಂಗಳ ಒಳಗೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಮತ್ತು ಗ್ರಾಮ ಅಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಕ್ತ ತಿಳುವಳಿಕೆ ನೀಡಿ, ಕಾಡುಗೊಲ್ಲ ಜಾತಿ ಪ್ರಮಾಣಪತ್ರ ಅರ್ಹರಿಗೆ ವಿತರಣೆಯಾಗುವಂತೆ ಮಾಡಬೇಕು. ಇಲ್ಲದಿದ್ದಲ್ಲಿ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆಯ ಸಂಸ್ಥಾಪಕ ಅಧ್ಯಕ್ಷ ಜಿ.ವಿ.ರಮೇಶ್, ಪದಾಧಿಕಾರಿಗಳಾದ ಪ್ರಕಾಶ್, ಪವನ, ಕುಮಾರ್, ಗುರುಶಾಂತ್, ಸುಚೇಂದ್ರ ಮತ್ತಿತರರು ಇದ್ದರು.