ಧಾರವಾಡ:
ಶಾಸ್ತ್ರೀಯ ಗಾಯನ (ಹಿಂದೂಸ್ತಾನಿ, ಕರ್ನಾಟಕಿ), ವಾದ್ಯಸಂಗೀತ (ತಾಳವಾದ್ಯ-ಸ್ವರ-ವಾದ್ಯ), ಲಘು ಗಾಯನ (ಭಾರತೀಯ), ಪಾಶ್ಚಿಮಾತ್ಯ ಗಾಯನ ಸಮೂಹ ಗಾಯನ, ಫೋಕ್ ಆರ್ಕೆಸ್ಟ್ರಾ, ಪಾಶ್ಚಿಮಾತ್ಯ ವಾದ್ಯಸಂಗೀತ, ಜಾನಪದ, ಬುಡಕಟ್ಟು ನೃತ್ಯ, ಶಾಸ್ತ್ರೀಯ ನೃತ್ಯ (ಭಾರತೀಯ), ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಏಕಾಂಕ ನಾಟಕ, ಸ್ಕಿಟ್, ಮೈಮ್, ಮಿಮಿಕ್ರಿ, ಚಿತ್ರಕಲೆ, ಕೊಲಾಜ್, ಪೋಸ್ಟರ್ ತಯಾರಿಕೆ, ಕ್ಲೇ ಮಾಡೆಲಿಂಗ್, ಕಾರ್ಟೂನಿಂಗ್, ರಂಗೋಲಿ, ಸ್ಪಾಟ್ ಫೋಟೋಗ್ರಾಫಿ, ಇನ್‌ಸ್ಟಾಲೇಶನ್, ಮೆಹಂದಿ ಹೀಗೆ ಒಟ್ಟು 27 ಸ್ಪರ್ಧೆಗಳು ನಡೆದವು.
ಕಾರ್ಯಕ್ರಮ ಉದ್ಘಾಟಿಸಿದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಕವಿವಿ ಯುವಜನೋತ್ಸವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ರೀತಿ ನಡೆಯುತ್ತದೆ. ಇಲ್ಲಿ ಭಾಗವಹಿಸಿದವರಿಗೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶಗಳಿವೆ. ವಿಭಿನ್ನ ಸಂಸ್ಕೃತಿ, ಕಲೆ ಪ್ರದರ್ಶಿಸಲು ಯುವಜನೋತ್ಸವ ಒಂದು ವೇದಿಕೆ ಒದಗಿಸುತ್ತದೆ. ಭಾರತದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳನ್ನು ಅನಾವರಣಗೊಳಿಸುತ್ತದೆ ಎಂದರು.ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಕರೀಮುನ್ನೀಸಾ ಸಯ್ಯದ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ನೋವು-ನಲಿವು, ಅವಮಾನ ಇರುತ್ತವೆ. ಅವೆಲ್ಲವೂ ಶಾಶ್ವತವಲ್ಲ. ಎಲ್ಲವನ್ನು ಮೆಟ್ಟಿ ನಿಂತಹವರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಶಾಲಾ ಹಂತದಲ್ಲಿ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಎನ್‌ಸಿಸಿ, ಎನ್ನೆಸ್ಸೆಸ್ ಅಂತಹವುಗಳಲ್ಲಿ ಭಾಗವಹಿಸಿದಾಗ ಮಾತ್ರ ಅವರು ಸಮಾಜಮುಖಿಯಾಗಿ ಬೆಳೆಯುತ್ತಾರೆ ಎಂದರು.
ಆಡಳಿತ ಮಂಡಳಿ ಸದಸ್ಯ ಎಸ್.ಬಿ. ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ, ಪ್ರಾಚಾರ್ಯರಾದ ಡಾ. ನೀಲಕ್ಕ ಪಾಟೀಲ ಸ್ವಾಗತಿಸಿದರು. ಎಸ್.ಎಸ್. ಸಂಗೊಳ್ಳಿ ಪರಿಚಯಿಸಿದರು. ಸಂಯೋಜಕ ಡಾ. ರಹಿಮಾನ್ ಗೊರಜನಾಳ ವಂದಿಸಿದರು. ಕನ್ನಡ ಉಪನ್ಯಾಸಕ ಡಾ.ಬಾಬು ಬೆಣ್ಣಿ ನಿರೂಪಿಸಿದರು.