ಕನ್ನಡಪ್ರಭ ವಾರ್ತೆ ಮೈಸೂರುಎಲ್ಲ ರೋಗಗಳಿಗೂ ಔಷಧವಿದೆ. ಆದರೆ, ಸಾಮಾಜಿಕ ಪಿಡುಗುಗಳಾದ ಬಡತನ, ನಿರುದ್ಯೋಗ, ಜಾತಿ ವ್ಯವಸ್ಥೆಗೆ ಔಷಧ ಇಲ್ಲದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಕಳವಳ ವ್ಯಕ್ತಪಡಿಸಿದರು.ನಗರದ ಯುವರಾಜ ಕಾಲೇಜಿನಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರವು ಬುಧವಾರ ಆಯೋಜಿಸಿದ್ದ ‘ಯುವ ಆರೋಗ್ಯ ಯೋಗ ಮಹೋತ್ಸವ’ ಉದ್ಘಾಟಿಸಿ ಮಾತನಾಡಿ, ‘ಆರೋಗ್ಯವೆಂದರೆ ದೈಹಿಕವಾಗಿ ಅಷ್ಟೇ ಅಲ್ಲ. ವ್ಯಕ್ತಿಯ ಮಾನಸಿಕ ಆರೋಗ್ಯವೂ ಮುಖ್ಯ. ಇಂದು ಯುವಕರಲ್ಲೂ ಹೃದ್ರೋಗ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದರು.ಆಧುನಿಕ ಜೀವನಶೈಲಿಯಿಂದ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ದಶಕಗಳ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕಟ್ಟುನಿಟ್ಟಿನ ಆಹಾರ ಪದ್ಧತಿ, ಶ್ರಮ ಜೀವನವು ವ್ಯಕ್ತಿಯನ್ನು ಆರೋಗ್ಯಪೂರ್ಣನಾಗಿ ಇರಿಸಿತ್ತು. ಜೀವನ ಶೈಲಿಯನ್ನು ಶಿಸ್ತಿನಿಂದ ಇರಿಸಿಕೊಳ್ಳುವುದು ಅನಿವಾರ್ಯ ಎಂದರು.ಜೀವನಶೈಲಿ, ಆಹಾರ ಪದ್ಧತಿಯನ್ನು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕು. ನಿಯಮಿತವಾಗಿ ಯೋಗ ಮಾಡಬೇಕು. ಉತ್ತಮ ಆರೋಗ್ಯವಿದ್ದರೆ ಮಾತ್ರವೇ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಯುವಕರು ಉನ್ನತ ಶಿಕ್ಷಣ ಪಡೆದರೂ, ಅವರಲ್ಲಿ ಆಹಾರ ಆಯ್ಕೆಯ ಬಗ್ಗೆ ಶಿಕ್ಷಣವೇ ಇಲ್ಲದಾಗಿದೆ. ರಸ್ತೆ ಬದಿಯ ಅಶುಚಿತ್ವದ ಆಹಾರವನ್ನೇ ಸ್ವಾದಿಷ್ಟ ಆಹಾರವೆಂದು ಸೇವಿಸುತಿದ್ದಾರೆ. ಯುವಕರು ನೈರ್ಮಲ್ಯಕ್ಕೆ ಗಮನ ಹರಿಸುತಿಲ್ಲ. ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೆ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದರು.ಪ್ರಾಂಶುಪಾಲ ಡಾ.ಎಸ್. ಮಹದೇವಮೂರ್ತಿ, ಆರೋಗ್ಯ ತಜ್ಞ ಡಾ.ಎಂ.ಎ. ಬಾಲಸುಬ್ರಹ್ಮಣ್ಯ, ಡಾ.ಎಂ.ಆರ್. ಸೀತಾರಾಮ್, ಶಿಶು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯುರ್ವೇದ ಆಸ್ಪತ್ರೆ ನಿರ್ದೇಶಕ ಡಾ. ಅನಿಲ್ ಕುಮಾರ್, ಡಾ. ಲಕ್ಷ್ಮಿನಾರಾಯಣ ಶೈಣೈ, ಡಾ.ಎಂ.ಎಸ್. ಮಹೇಶ್, ಆಂಥೋನಿ ಪಾಲ್‌ರಾಜ್, ಡಾ.ಎನ್. ರಾಜೇಶ್, ಪ್ರೊ.ಆರ್. ಶೇಖರ ನಾಯಕ ಇದ್ದರು.