ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಲೆ ಸಂಸ್ಕೃತಿಗೆ ಯುವವಾಹಿನಿ ಹಲವಾರು ವರ್ಷಗಳಿಂದ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಕಲಾವಿದರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಹಿಂದಿನಿಂದ ಬಂದ ಕಲೆ, ಸಂಸ್ಕೃತಿಯಲ್ಲಿ ಹಲವಾರು ನೈಜ ಘಟನೆಗಳು ಇದ್ದು ಇದನ್ನು ಪ್ರದರ್ಶಿಸುವುದರಿಂದ ಜನರಲ್ಲಿ ಪ್ರಜ್ಞೆ ಮೂಡಲು ಸಹಕಾರಿಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು.ಅವರು ಭಾನುವಾರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ನಡೆದ ‘ಯುವವಾಹಿನಿ ಡೆನ್ನಾನ - ಡೆನ್ನಾನ 2024 ರಂಗಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹಿಂದೆ ಕೆಲವೇ ಕೆಲವು ವರ್ಗದವರಿಗೆ ಶಿಕ್ಷಣ ಪಡೆಯುವ ಅವಕಾಶ ಇದ್ದು ಅದರಲ್ಲೂ ಮಹಿಳೆಯರಿಗೆ ಶಿಕ್ಷಣವೇ ಇಲ್ಲದಂತಾಗಿತ್ತು. ಜ್ಯೋತಿಬಾಫುಲೆಯಂತಹ ಮಹಾನ್ ವ್ಯಕ್ತಿಗಳಿಂದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು. ಇಂದು ಸರಕಾರಿ ವ್ಯವಸ್ಥೆಯಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಕಟ್ಟಕಡೆಯ ಕುಟುಂಬದ ಮಕ್ಕಳು ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು ಎಂದರು.ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಮಾತನಾಡಿ ಯುವವಾಹಿನಿ ಉತ್ತಮ ಕಾರ್ಯಕ್ರಮ ಮಾಡುತ್ತಿದ್ದು ಕಲೆ, ಸಂಸ್ಕೃತಿಗೆ ಆದ್ಯತೆ ನೀಡುವ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ್ಯ ನೀಡುವ ಕಾರ್ಯ ಮಾಡಬೇಕು. ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆಗಳಿದ್ದು ಗುರುತಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದು ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಊರ, ಕಾರ್ಯದರ್ಶಿ ಯಶೋಧರ ಮುಂಡಾಜೆ, ಪದ್ಮನಾಭ ಕೋಟ್ಯಾನ್, ಡಾ. ಚಿದಾನಂದ ತೋನ್ಸೆ, ಜಗದೀಶ್ ಡಿ. ಉಪಸ್ಥಿತರಿದ್ದರು.ಸಾಧಕ ಕಲಾವಿದ ನರೇಶ್ ಕುಮಾರ್ ಸಸಿಹಿತ್ಲು ಇವರಿಗೆ ಡೆನ್ನಾನ - ಡೆನ್ನಾನ- 2024 ಯುವವಾಹಿನಿ ರಂಗಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ರಾಜಾರಾಂ ಕೆ.ವಿ., ಪದ್ಮನಾಭ ಕೋಟ್ಯಾನ್, ವಿನೋದ್ ಮಂಚಿ, ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್ ಸ್ವಾಗತಿಸಿದರು. ಚಂದ್ರಹಾಸ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜ್ನಾ ಒಡಿಳ್ನಾಳ, ಸಮೀಕ್ಷಾ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.