ಹಳಿಯಾಳ: ಚುನಾವಣೆಯನ್ನು ಗೆಲ್ಲಲಿಕ್ಕಾಗಿಯೇ ಸ್ಪರ್ಧಿಸಬೇಕೇ ಹೊರತು, ಸೋಲುವುದಕಲ್ಲ. ಜಿಪಂ ಮತ್ತು ತಾಪಂ ಚುನಾವಣೆಗಳು ಘೋಷಣೆಯಾಗಲಿದ್ದು, ಅದಕ್ಕಾಗಿ ಉತ್ಸಾಹಿ ಕಾರ್ಯಕರ್ತರು ಸಿದ್ಧರಾಗಬೇಕು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಜನಸೇವೆ ಮಾಡಲು ಇದೊಂದು ಅವಕಾಶವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿನ ಶಾಸಕರ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗುವ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಜಿಪಂ ಮತ್ತು ತಾಪಂಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಬೇಕು. ಆಗ ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳನ್ನು, ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯ. ಆದಷ್ಟು ಕಾಂಗ್ರೆಸ್ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ಅಥವಾ ಗ್ರಾಮಗಳಲ್ಲಿನ ಮತದಾರರನ್ನು ಭೇಟಿಯಾಗಲು ಸಮಯ, ವಾರದಲ್ಲಿ ಕೆಲವು ದಿನಗಳನ್ನು ಮೀಸಲಾಗಿಡಿ. ಅವರ ಕಷ್ಟ ದುಖಃಗಳನ್ನು ಆಲಿಸಿ ಸಮಸ್ಯೆ ಬಗೆಹರಿಸಲು ಸ್ಪಂದಿಸಿ. ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿ, ಹೀಗೆ ಮಾಡಿದರೇ ಮಾತ್ರ ನೀವುಗಳು ಮತದಾರರ ಮನಸನ್ನು ಗೆಲ್ಲಲು ಸಾಧ್ಯ ಎಂದರು.ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಆದರೆ, ಕ್ರಿಯಾಶೀಲವಾಗಿಲ್ಲ, ಚುನಾವಣೆಯ ಸಮಯದಲ್ಲಿ ಎಚ್ಚೆತ್ತು ಕೊಳ್ಳುವ ಕಾರ್ಯಕರ್ತರು ಮತ್ತು ಮುಖಂಡರು ನಂತರ ಗಾಢನಿದ್ರೆಗೆ ಜಾರುತ್ತಾರೆ. ಹೀಗಾದರೇ ಪಕ್ಷದ ಸಂಘಟನೆ ಅಸಾಧ್ಯ. ತಮ್ಮ ವ್ಯಾಪ್ತಿಗೊಳಪಡುವ ಮತದಾರರು, ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಆಗ ಮಾತ್ರ ಪಕ್ಷದ ಸಂಘಟನೆ ಸಾಧ್ಯ ಎಂದರು.
ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಅಭಿಯಾನದಲ್ಲಿ ಹಳಿಯಾಳ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಯಕರ್ತರು ಪಾಲ್ಗೊಳ್ಳಬೇಕು. ಅದಕ್ಕಾಗಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕು ಮಟ್ಟದಲ್ಲಿ ಸಿದ್ಧತೆ ನಡೆಸಿ ಎಂದರು.ಸಭೆಯಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ದಾಂಡೇಲಿ ಬ್ಲಾಕ್ ಅಧ್ಯಕ್ಷ ಮೋಹನ ಹಲವಾಯಿ, ಜೋಯಿಡಾ ಬ್ಲಾಕ್ ಅಧ್ಯಕ್ಷ ಮೋಹನ ಪಟೇಲ, ಕೆ.ಪಿ.ಸಿ.ಸಿ. ಸದಸ್ಯ ಸುಭಾಸ ಕೊರ್ವೇಕರ, ಹಳಿಯಾಳ ಪುರಸಭಾ ಮತ್ತು ದಾಂಡೇಲಿ ನಗರಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಮುಖಂಡರು ಇದ್ದರು.