ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆ: ಸಿ.ಟಿ. ರವಿ ಆರೋಪ

KannadaprabhaNewsNetwork | Published : May 20, 2025 1:00 AM
ಚಿಕ್ಕಮಗಳೂರು, ಯಾವುದೇ ಅಭಿವೃದ್ಧಿ ಇಲ್ಲದ ಪರಿಣಾಮ ರಾಜ್ಯದ ಜನರು ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Follow Us

ಯಾವ ಪುರುಷಾರ್ಥಕ್ಕೆ ಸಾಧನೆ ಸಮಾವೇಶ, ಹಗರಣ, ಭ್ರಷ್ಟಚಾರದ ಬಗ್ಗೆ ಶ್ವೇತಪತ್ರ ಹೊರಡಿಸಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯಾವುದೇ ಅಭಿವೃದ್ಧಿ ಇಲ್ಲದ ಪರಿಣಾಮ ರಾಜ್ಯದ ಜನರು ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಲಿನ ದರ ಲೀಟರ್‌ಗೆ ₹9, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ಮೇಲಿನ ರಾಜ್ಯದ ಸುಂಕ ಹೆಚ್ಚಳ, ಕುಡಿಯುವ ನೀರು ದರ, ಆಸ್ತಿ ತೆರೆಗೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಪ್ರಯಾಣದ ಬಸ್ - ಮೆಟ್ರೋ ಪ್ರಯಾಣ ದರ ಹೆಚ್ಚಳ, ಬಿತ್ತನೆ ಬೀಜ, ಟಿಸಿ ಸಂಪರ್ಕ ಬಲು ದುಬಾರಿ, ದಿನ ಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಡವರು, ಮಧ್ಯಮ ವರ್ಗದವರ ಜೇಬಿಗೆ ಸರ್ಕಾರ ಕತ್ತರಿ ಹಾಕಿರುವುದು ಸರ್ಕಾರದ ಸಾಧನೆಯೇ ಎಂದು ಸೋಮವಾರ ಸುದ್ಧಿಗೋಷ್ಠಿ ಯಲ್ಲಿ ಪ್ರಶ್ನಿಸಿದರು.

ಮೂಡ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಕಾರ್ಮಿಕ ಇಲಾಖೆ ಹಗರಣ, ಎಸ್ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ಕೊಟ್ಟಿರುವುದು ಸರ್ಕಾರದ ಸಾಧನೆಯೇ ಎಂದು ಸಿಎಂ ಮತ್ತು ಉಪ ಮುಖ್ಯ ಮಂತ್ರಿಗೆ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಕಿರುಕುಳ, ಕಮಿಷನ್ ದಾಹಕ್ಕೆ ಬಲಿಯಾದ ಪ್ರಾಮಾಣಿಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಾವುಗಳು, ಕಳಪೆ ಔಷಧ ಪೂರೈಕೆಯಿಂದ 460 ಕ್ಕೂ ಹೆಚ್ಚು ಬಾಣಂತಿಯರು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಕ್ಕೆ ಸಾಧನಾ ಸಮಾವೇಶದ ಮೂಲಕ ಸಂಭ್ರಮಾಚರಣೆಯೇ ಎಂದು ಆರೋಪಗಳ ಸುರಿಮಳೆಗೈದರು.

ಕಳೆದ 24 ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಕ್ಫ್ ಮಂಡಳಿ ಹೆಸರಿನಲ್ಲಿ ಮಠ ಮಂದಿರಗಳು ರೈತರ ಜಮೀನು ಕಬಳಿಸಿರುವುದು ಸಾಧನೆಯೇ ? ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟು ಗಳನ್ನು ಮಾಡಿ ಲಕ್ಷಾಂತರ ಯುವಕರ ಕನಸು ನುಚ್ಚುನೂರು ಮಾಡುವ ಮೂಲಕ ಅವರ ಭವಿಷ್ಯ ಹಾಳು ಮಾಡಿರುವುದು ಸರ್ಕಾರದ ಸಾಧನೆಯೇ ಎಂದು ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರ ಬಿಲ್ ಪಾವತಿಗೆ, ರಸ್ತೆ ಗುಂಡಿ ಮುಚ್ಚಲು, ಸಾರಿಗೆ ನೌಕರರ ಸಂಬಳಕ್ಕೆ ದುಡ್ಡಿಲ್ಲ, ಆಂಬುಲೆನ್ಸ್ ಚಾಲಕರ ಸಂಬಳಕ್ಕೆ ,ಹಾಲು ಉತ್ಪಾದಕರ ಬಾಕಿ ಪಾವತಿಗೆ , ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗೆ, ಎನ್‌ಎಚ್‌ಎಂ ನೌಕರರ ಸಂಬಳಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ, ಖಜಾನೆ ಖಾಲಿಯಾಗಿರುವ ಪರಿಣಾಮ ಕರ್ನಾಟಕದಿಂದ ಪ್ರಮುಖ ಕೈಗಾರಿಕೆಗಳು ವಲಸೆ ಹೋಗುತ್ತಿರುವುದು ಸರ್ಕಾರದ ಸಾಧನೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡ ಜೆ. ಡಿ.ಲೋಕೇಶ್, ಮಾಧ್ಯಮ ಪ್ರಮುಖ ದಿನೇಶ್ ಕೋಟೆ, ಮುಖಂಡ ಸಚಿನ್ ಉಪಸ್ಥಿತರಿದ್ದರು.----ಬಾಕ್ಸ್‌ ---

ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆರಾಜ್ಯ, ದೇಶದ ಬೊಕ್ಕಸಕ್ಕೆ ಬೆಂಗಳೂರಿಗರಿಂದ ದೊಡ್ಡ ಪ್ರಮಾಣದ ಹಣ ಬರುತ್ತೆ. ಆದರೆ, ಬೆಂಗಳೂರಿಗರ ಬದುಕನ್ನ ನಾವು ಮುಳುಗಿಸುತ್ತಿದ್ದೇವೆ ಎಂದು ಸಿ.ಟಿ. ರವಿ ಹೇಳಿದರು.

ಕೆಂಪೇಗೌಡರ ಕಾಲ ಹಾಗೂ ಮದ್ಯದಲ್ಲಿ ಪ್ಲಾನಡ್ ಬೆಂಗಳೂರು ಇತ್ತು. ಈಗ ಅನ್ ಪ್ಲಾನಡ್ ಬೆಂಗಳೂರು ಕಂದಾಯ ನಿವೇಶನ, ಲೂಟಿ ಹೊಡೆಯಲು ರಾಜಕಾಲುವೆ, ಕೆರೆಗಳನ್ನೇ ನುಂಗಿರೋದು, ಪ್ರತಿವರ್ಷ ಸಾವಿರಾರು ಕೋಟಿ ಹಣ ಹಾಕ್ತೀವಿ, ದುಡ್ ಎಲ್ಲಿ ಹೋಗ್ತಿದೆ. ರಾಜಕಾಲುವೆ ಒತ್ತುವರಿ ಕೂಡ ದಂಧೆಯಾಗಿದೆ, ಹೆದರಿಸೋ ದಂಧೆಯಾಗಿದೆ. ಇದೇನಾ ಬ್ರಾಂಡ್ ಬೆಂಗಳೂರು, ಇದು ಇವರಿಗೆ ಕರೆಯೋ ಹಸು, ಕರೆಯುತ್ತಲೇ ಇರಬೇಕು ಎಂದರು.

ರಾಜ್ಯದ ಆದಾಯದಲ್ಲಿ ಶೇ. 70 ಬೆಂಗಳೂರಿಂದ ಬರುತ್ತೆ. ಬೆಂಗಳೂರು ಸರಿ ಮಾಡದೋರು ರಾಜ್ಯವನ್ನ ಹೇಗೆ ಸರಿ ಮಾಡ್ತಾರೆ. ಈ ಸರ್ಕಾರ ಬ್ರಾಂಡ್ ಬೆಂಗಳೂರು ಅನ್ನುತ್ತೆ, ಇದೇನಾ ಬ್ರಾಂಡ್ ಬೆಂಗಳೂರು ಎಂದು ಪ್ರಶ್ನಿಸಿದರು.

-- ಬಾಕ್ಸ್‌ --

ರಾಜ್ಯ ಸರ್ಕಾರಕ್ಕೆ ಧೈರ್ಯ ಇದ್ದರೆ ತಾನು ಮಾಡಿರುವ ಸಾಲದ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಭ್ರಷ್ಟಾಚಾರ ಹಾಗೂ ಹಗರಣಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಜೊತೆಗೆ ಸಮರ್ಪಣಾ ಸಮಾವೇಶದಲ್ಲಿಯೇ ಈ ಬಗ್ಗೆ ಜನರಿಗೆ ಉತ್ತರ ನೀಡಬೇಕು. ಅದನ್ನು ಬಿಟ್ಟು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಜನರ ದುಡ್ಡಲ್ಲಿ ಸಮಾವೇಶ ಮಾಡುವುದು ಸರಿಯಲ್ಲ.

ಸಿ.ಟಿ.ರವಿ

ವಿಧಾನ ಪರಿಷತ್ ಸದಸ್ಯರು

19 ಕೆಸಿಕೆಎಂ 5ಚಿಕ್ಕಮಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳ ಪಟ್ಟಿ ಬಿಡುಗಡೆ ಮಾಡಿದರು. ಎಂ.ಆರ್.ದೇವರಾಜಶೆಟ್ಟಿ, ಎಚ್.ಸಿ.ಕಲ್ಮರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.