ಶೂನ್ಯ ದಾಖಲಾತಿ<bha>;</bha> 10 ಕನ್ನಡ ಶಾಲೆಗಳಿಗೆ ಬೀಗ ಜಡಿಯಲು ಸಿದ್ಧತೆ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯಲು ಪೋಷಕರ ಇಂಗ್ಲಿಷ್ ಮೋಹವಷ್ಟೇ ಕಾರಣವಲ್ಲ, ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳ ಕೊರತೆಯೂ ಸಹ ಕಾರಣ ಎನ್ನುತ್ತಾರೆ ಜಿಲ್ಲೆಯ ಕನ್ನಡಪರ ಹೋರಾಟಗಾರರು ಹಾಗೂ ಚಿಂತಕರು.

ಕೆ.ಎಂ. ಮಂಜುನಾಥ್

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದಾಗಿ ರಾಜ್ಯದಲ್ಲಿ 567 ಶಾಲೆಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಪೈಕಿ ಗಣಿ ಜಿಲ್ಲೆಯ 10 ಕನ್ನಡ ಪ್ರಾಥಮಿಕ ಶಾಲೆಗಳು ಬಾಗಿಲು ಮುಚ್ಚುವ ಅಪಾಯ ಎದುರಾಗಿದೆ!

ಮಕ್ಕಳ ದಾಖಲಾತಿ ಇಲ್ಲದ 15 ಖಾಸಗಿ ಶಾಲೆಗಳಿಗೂ ಬೀಗ ಬೀಳುವ ಸಾಧ್ಯತೆಯಿದೆ. ವಿಪರ್ಯಾಸ ಸಂಗತಿ ಎಂದರೆ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಷವಿಡೀ ಕರ್ನಾಟಕ ಸಂಭ್ರಮ ಆಚರಿಸಲು ಮಹತ್ವದ ನಿಲುವು ತೆಗೆದುಕೊಂಡಿರುವ ಬೆನ್ನಲ್ಲೇ ರಾಜ್ಯದ ಕನ್ನಡ ಶಾಲೆಗಳು ಕದ ಮುಚ್ಚುವ ಸ್ಥಿತಿ ತಲುಪಿವೆ.ಶಾಲೆ ಮುಚ್ಚಲು ಪ್ರಮುಖ ಕಾರಣ:

ಇಂಗ್ಲಿಷ್ ಶಿಕ್ಷಣ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದಾಗಿ ಬಿಂಬಿಸುವ ಖಾಸಗಿ ಶಾಲೆಗಳ ಸೆಳೆತ ಹಾಗೂ ಸರ್ಕಾರಿ ಶಾಲೆಗಳಲ್ಲಿರುವ ನಾನಾ ಕೊರತೆಗಳಿಂದಾಗಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ತೀರಾ ಬಡಜನರು ಸಹ ಸಾಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕುಸಿಯಲಾರಂಭಿಸಿದೆ. ಇದು ಶೂನ್ಯ ದಾಖಲಾತಿ ಹಂತಕ್ಕೆ ಬಂದು ನಿಂತಿದೆ. ಖಾಸಗಿ ಶಾಲೆಗಳತ್ತ ಪೋಷಕರು ಆಸ್ಥೆ ವಹಿಸುತ್ತಿರುವ ಪ್ರಮಾಣ ಗಮನಿಸಿದರೆ ಮುಂದಿನ ವರ್ಷ ಸುಮಾರು 30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿದರೆ ಅಚ್ಚರಿಯಿಲ್ಲ. ಇದು ಹೀಗೆಯೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಕನ್ನಡ ಶಾಲೆಗಳು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಉಳಿದರೆ ಅಚ್ಚರಿಯಿಲ್ಲ ಎಂಬ ಆತಂಕ ಮೂಡಿದೆ.

ಇಂಗ್ಲಿಷ್ ಮೋಹವಷ್ಟೇ ಕಾರಣವಲ್ಲ:

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯಲು ಪೋಷಕರ ಇಂಗ್ಲಿಷ್ ಮೋಹವಷ್ಟೇ ಕಾರಣವಲ್ಲ, ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳ ಕೊರತೆಯೂ ಸಹ ಕಾರಣ ಎನ್ನುತ್ತಾರೆ ಜಿಲ್ಲೆಯ ಕನ್ನಡಪರ ಹೋರಾಟಗಾರರು ಹಾಗೂ ಚಿಂತಕರು.

ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಸಹ ಕನಿಷ್ಠ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯಾರ್ಥಿನಿಯರಿಗೆ ಶೌಚಾಲಯ, ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯವಿಲ್ಲ. ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ. ಶಿಕ್ಷಕರ ಅಭಾವ ದೊಡ್ಡ ಸಂಖ್ಯೆಯಲ್ಲಿದ್ದು, ಅತಿಥಿ ಶಿಕ್ಷಕರ ಮೇಲೆಯೇ ಶಾಲೆಗಳು ನಡೆಯುವಂತಾಗಿದೆ.

ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಅನೇಕ ವರ್ಷಗಳಿಂದಲೂ ಸರ್ಕಾರಿ ಶಾಲೆಗಳು ಸಮಸ್ಯೆಗಳ ತಾಣವಾಗಿವೆ. ಹೀಗಾಗಿ ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಖಾಸಗಿ ಶಾಲೆಗಳತ್ತ ಮುಖಮಾಡುವಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸರ್ಕಾರಕ್ಕೆ ರವಾನೆ:

ಜಿಲ್ಲೆಯಲ್ಲಿ ಸರ್ಕಾರಿ 10 ಹಾಗೂ ಖಾಸಗಿ 15 ಶಾಲೆಗಳು ಶೂನ್ಯ ದಾಖಲಾತಿ ಶಾಲೆಗಳು ಎಂದು ತಿಳಿದು ಬಂದಿದೆ. ಈ ಕುರಿತು ಆಯಾ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ದೃಢೀಕರಣ ಪಡೆದು ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಡಿಡಿಪಿಐ ಹನುಮಕ್ಕತಿಳಿಸಿದರು.ಸೂಕ್ತ ನಿರ್ಧಾರ ಕೈಗೊಳ್ಳಲಿ:

ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಅತ್ಯಂತ ಅವೈಜ್ಞಾನಿಕ. ಶಾಲೆ ಮುಚ್ಚುವ ಬದಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಕುರಿತು ಶಿಕ್ಷಣ ತಜ್ಞರ ಜತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಲೇಖರ ಸಿದ್ಧರಾಮ ಕಲ್ಮಠ ಅವರ ಒತ್ತಾಯ.

ಕಾಳಜಿ:

ರಾಜ್ಯ ಸರ್ಕಾರ ಶಾಲೆಗಳನ್ನು ಮುಚ್ಚುವ ತೀರ್ಮಾನಕ್ಕೆ ಬರುವ ಮುಂಚೆ ಅವುಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತನೆ ಮಾಡಬೇಕು. ಮೊದಲು ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಳಜಿಯನ್ನು ಈ ಸರ್ಕಾರ ತೆಗೆದುಕೊಳ್ಳಲಿ ಎಂದು ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷ ಕೆ. ಎರಿಸ್ವಾಮಿ ಆಗ್ರಹಿಸಿದರು.

Share this article