ಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಿ: ಪ್ರೊ.ಸಿ.ಪಿ. ಸಿದ್ಧಾಶ್ರಮ

KannadaprabhaNewsNetwork | Published : May 6, 2024 12:36 AM

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಭಾಷಿಕರು ಬೇರೆ ಭಾಷೆ ಆಡಳಿತ ಅಧೀನದಲ್ಲಿದ್ದರು. ಆ ವೇಳೆ ಕನ್ನಡ ಕಟ್ಟುವ ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ವೇಳೆ ಸ್ಮರಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಪತ್ರಿಕೆಗಳನ್ನು ಕೊಂಡು ಓದುವ, ಪುಸ್ತಕಗಳನ್ನು ಖರೀದಿಸುವ ಕಡೆಗೆ ಗಮನ ಹರಿಸಬೇಕು. ಆ ಮೂಲಕ ಕನ್ನಡ ಮತ್ತು ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಸಿ.ಪಿ. ಸಿದ್ಧಾಶ್ರಮ ಕರೆ ನೀಡಿದರು.

ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ವರ್ಷದ ಸಂಸ್ಥಾಪನ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಹಿರಿಯ ಸಾಹಿತಿಗಳಿಗೆ ಸನ್ಮಾನ, ಕವಿಗೋಷ್ಠಿ, ಗೀತಗಾಯನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಭಾಷಿಕರು ಬೇರೆ ಭಾಷೆ ಆಡಳಿತ ಅಧೀನದಲ್ಲಿದ್ದರು. ಆ ವೇಳೆ ಕನ್ನಡ ಕಟ್ಟುವ ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ವೇಳೆ ಸ್ಮರಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಏಕತೆ ಹಾಗೂ ಅಸ್ಮಿತೆಯ ಸಂಕೇತ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನೀಡಿ

ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮದಲ್ಲಿಯೇ ನೀಡಬೇಕು. ಕನ್ನಡವನ್ನು ಆಡಳಿತ ಭಾಷೆಯಾಗಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯು ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಬರಬೇಕು. ಕುವೆಂಪು ಸೇರಿದಂತೆ ಎಲ್ಲಾ ಸಾಹಿತಿಗಳು ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡಬೇಕೆಂದು ಹೇಳಿದ್ದರೂ, ಅನುಷ್ಠಾನಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕನಿಷ್ಠ 1ನೇ ತರಗತಿಯಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಮುಖ್ಯ ಕಚೇರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದರು.

ಇದೇ ವೇಳೆ ಹಿರಿಯ ಸಾಹಿತಿಗಳಾದ ಪ್ರೊ.ಎಸ್. ರಾಮಪ್ರಸಾದ್, ಟಿ.ಎಸ್. ನಾಗರತ್ನ, ಸಿ. ಚಾಮಶೆಟ್ಟಿ, ಇಂದಿರಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ನಂತರ ಕವಿಗಳಿಂದ ಕವಿಗೋಷ್ಠಿ ಮತ್ತು ಗಾಯಕರಿಂದ ಕನ್ನಡ ಗೀತ ಗಾಯನ ಜರುಗಿತು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ವಿಜಯಕುಮಾರಿ ಎಸ್. ಕರಿಕಲ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವ ಕಾರ್ಯದರ್ಶಿಗಳಾದ ಲತಾ ಮೋಹನ್, ಚೀಲೂರು ಚಂದ್ರಶೇಖರ್, ಖಜಾಂಚಿ ಜಿ. ಪ್ರಕಾಶ್, ಜಂಟಿ ಕಾರ್ಯದರ್ಶಿ ಕೆ. ಕೆಂಪಣ್ಣ, ಸಂಘಟನಾ ಕಾರ್ಯದರ್ಶಿ ಮೈ.ನಾ. ಲೋಕೆಶ್ ಮೊದಲಾದವರು ಇದ್ದರು.

ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಬಳಸಲಾಗುತ್ತಿದೆ. ಆದರೆ, ಆಡಳಿತಕ್ಕೆ ಚಾಲಕ ಶಕ್ತಿಯಾಗಿರುವ ವಿಧಾನಸೌಧದಲ್ಲಿಯೇ ಇಂಗ್ಲಿಷ್‌ಬಳಕೆ ವ್ಯಾಪಕವಾಗಿದೆ. ಅಧಿಕಾರಿಗಳು, ರಾಜಕಾರಣಿಗಳು ಕನ್ನಡತನವನ್ನು ಮೆರೆಯಬೇಕು.

- ಡಾ.ಸಿ.ಪಿ. ಸಿದ್ಧಾಶ್ರಮ, ವಿಮರ್ಶಕ

Share this article