ವಿಧಾನಸಭಾ ಕ್ಷೇತ್ರದಲ್ಲಿನ ಜಿಲ್ಲಾ ಮತ್ತು ತಾಪಂ ಚುನಾವಣೆಯ ಕ್ಷೇತ್ರವಾರು ಕರಡು ಮೀಸಲು ಪಟ್ಟಿ ಪ್ರಕಟಗೊಂಡಿದ್ದು ಆಕ್ಷೇಪಣೆ ಸಲ್ಲಿಸಲು ಅ. 19 ಕೊನೆಯ ದಿನವಾಗಿದೆ.
- ಎಲ್ಲ ರಾಜಕೀಯ ಪಕ್ಷಗಳಿಂದಲೂ ಕ್ಷೇತ್ರ ಮೀಸಲಾತಿಗೆ ಆಕ್ಷೇಪ
-ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನ
ಫಕ್ರುದ್ದೀನ ಎಂ.ಎನ್.
ಕನ್ನಡಪ್ರಭ ವಾರ್ತೆ ನವಲಗುಂದ
ವಿಧಾನಸಭಾ ಕ್ಷೇತ್ರದಲ್ಲಿನ ಜಿಲ್ಲಾ ಮತ್ತು ತಾಪಂ ಚುನಾವಣೆಯ ಕ್ಷೇತ್ರವಾರು ಕರಡು ಮೀಸಲು ಪಟ್ಟಿ ಪ್ರಕಟಗೊಂಡಿದ್ದು ಆಕ್ಷೇಪಣೆ ಸಲ್ಲಿಸಲು ಅ. 19 ಕೊನೆಯ ದಿನವಾಗಿದೆ.
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿನ ಮೀಸಲಾತಿ ಪಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಏತನ್ಮಧ್ಯೆ ಕ್ಷೇತ್ರದಲ್ಲಿನ ಅಂತಿಮ ಮೀಸಲು ಪಟ್ಟಿಯಲ್ಲಿ ಬದಲಾವಣೆ ಲೆಕ್ಕಾಚಾರ ನಡೆಯುತ್ತಿದೆ.
ಕರಡು ಮೀಸಲು ಪೆಟ್ಟಿಗೆ ದೊಡ್ಡ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರು ಸಮುದಾಯವಾರು ಪ್ರತ್ಯೇಕ ಸಭೆ ನಡೆಸಿ ಮೀಸಲು ಬದಲಾವಣೆಯಾಗದಿದ್ದರೆ ಚುನಾವಣೆಯಲ್ಲಿ ಅಸಹಕಾರ ತೋರುವುದಾಗಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರದಲ್ಲಿ 8 ಜಿಪಂ ಕ್ಷೇತ್ರಗಳ ಪೈಕಿ ಅಳಗವಾಡಿ, ಶಲವಡಿ, ನೆಲವಡಿ ಹಾಗೂ ತಿರ್ಲಾಪುರ 4 ಸ್ಥಾನ ಮಹಿಳೆಗೆ ಹಾಗೂ ಮೊರಬ, ಕೋಳಿವಾಡ, ಬ್ಯಾಹಟ್ಟಿ ಸಾಮಾನ್ಯ ಕುಸುಗಲ್ಲ ಹಿಂದುಳಿದ ಅ ವರ್ಗಕ್ಕೆ ಮೀಸಲಿಡಲಾಗಿದೆ. ಆದರೆ, ಅಣ್ಣಿಗೇರಿ ತಾಲೂಕಿನ ಎರಡು ಕ್ಷೇತ್ರಗಳನ್ನು ಸಾಮಾನ್ಯ ಮಹಿಳಾ ಮೀಸಲಾಗಿದ್ದರಿಂದ ಈ ತಾಲೂಕಿನಲ್ಲಿ ಪಕ್ಷಾತೀತವಾಗಿ ದೊಡ್ಡ ಮಟ್ಟದ ಆಕ್ಷೇಪ ವ್ಯಕ್ತವಾಗಿದೆ. ನವಲಗುಂದ ತಾಲೂಕಿನಲ್ಲಿ ಒಂದು ಸಾಮಾನ್ಯ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ 2 ಸಾಮಾನ್ಯ ಸ್ಥಾನ ಮಿಸಲಿಡಲಾಗಿದೆ. ಆದರೆ, ಅಣ್ಣಿಗೇರಿ ತಾಲೂಕಿಗೆ ಒಂದೂ ಸಾಮಾನ್ಯ ಕ್ಷೇತ್ರ ನೀಡಿಲ್ಲ. ರೊಟೇಷನ್ ನಿಯಮ ಪಾಲನೆಯಾಗಿಲ್ಲ ಎಂಬ ಬಲವಾದ ಆರೋಪ ಕೇಳಿ ಬರುತ್ತಿದೆ.
ಇನ್ನುಳಿದಂತೆ ಮೀಸಲು ಬದಲಾವಣೆ ಮಾಡಲು ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ್ಯ ಇದೆ. ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಿಪಂ ಕ್ಷೇತ್ರಗಳಲ್ಲಿ ಒಂದೆರಡು ಭಾಗಗಳಲ್ಲಿ ಅಂತಿಮ ಮೀಸಲು ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಿಪಂ-ತಾಪಂ ಕ್ಷೇತ್ರವಾರು ಮೀಸಲು ಪಟ್ಟಿಗೆ ಕಾಂಗ್ರೆಸ್ ಮುಖಂಡರಲ್ಲೇ ದೊಡ್ಡ ಮಟ್ಟದ ಅಸಮಾಧಾನ ವ್ಯಕ್ತವಾಗಿದೆ. ವಿಶೇಷವಾಗಿ ಕ್ಷೇತ್ರ ವ್ಯಾಪ್ತಿಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರು ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಕ್ಷೇತ್ರಗಳಲ್ಲಿ ಮೀಸಲು ಬದಲಾವಣೆಯಾಗಿರುವುದು ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರವೇ ಬುಡಮೇಲಾಗಿದೆ. ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ ಮೀಸಲು ಬದಲಾವಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ನವಲಗುಂದ ತಾಲೂಕಿಗೆ ಇನ್ನೊಂದು ಸಾಮಾನ್ಯ ಕ್ಷೇತ್ರದ ಮೀಸಲು ನೀಡುವ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಮೀಸಲು ನಿಗದಿಪಡಿಸುವ ಅಧಿಕಾರ ಸರ್ಕಾರದ ಅಧೀನದಲ್ಲಿರುವುದರಿಂದ ಮೀಸಲು ಬದಲಾವಣೆ ಸುಲಭದಲ್ಲಿ ಮಾಡಬಹುದಾಗಿದೆ. ಆದರೆ, ಶಾಸಕರು ಮನಸ್ಸು ಮಾಡಿದಲ್ಲಿ ಮಾತ್ರ ಮೀಸಲು ಬದಲಾವಣೆ ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ.ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ. 50ಕ್ಕೂ ಹೆಚ್ಚು ಮತದಾರರು ಮಹಿಳೆಯರೇ ಇದ್ದಾರೆ. ಮೀಸಲಾತಿ ಸರಿಯಿಲ್ಲ ಎಂಬ ಅಭಿಪ್ರಾಯ ಇದ್ದರೆ 2005, 2010, 2016ರಲ್ಲಿ ಯಾವ ಕ್ಯಾಟಗರಿ ಇತ್ತು, 2011ರ ಜನಗಣತಿ ಪ್ರಕಾರ ಜನಸಂಖ್ಯೆ ಎಷ್ಟಿತ್ತು ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ದಾಖಲೆ ಸಮೇತ ಆಕ್ಷೇಪಣೆ ಸಲ್ಲಿಸಲು ಎಲ್ಲರಿಗೂ ಅವಕಾಶ ಇದೆ. ಎಲ್ಲರನ್ನೂ ಖುಷಿ ಪಡಿಸುವುದು ಈ ವಿಚಾರದಲ್ಲಿ ಕಷ್ಟ. ಆಕ್ಷೇಪಣೆ ಸಲ್ಲಿಸಿದ ನಂತರ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಾರೆ ಶಾಸಕ ಎನ್.ಎಚ್. ಕೋನರಡ್ಡಿ.ಜಿಲ್ಲಾ ಪಂಚಾಯಿತಿ ಮೀಸಲಾತಿ ಪಟ್ಟಿಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವರ್ಗ ನೀಡುವಲ್ಲಿ ಭಾರೀ ವಂಚನೆಯಾಗಿದೆ. ನವಲಗುಂದ ತಾಲೂಕಿನಲ್ಲಿ ಕೇವಲ 1 ಸಾಮಾನ್ಯ ಮೀಸಲಾತಿ ನೀಡಲಾಗಿದೆ. ಅಣ್ಣಿಗೇರಿ ತಾಲೂಕಿನ ಎರಡಕ್ಕೆ ಎರಡು ಕ್ಷೇತ್ರ ಮಹಿಳಾ ಮೀಸಲು ನೀಡಿ ಸಾಮಾನ್ಯ ವರ್ಗದಲ್ಲಿ ಪುರುಷರು ನಿಲ್ಲದಂತೆ ವ್ಯವಸ್ಥಿತ ಪಿತೂರಿ ನಡೆದಿದೆ ಎನ್ನುತ್ತಾರೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.