ಜೋಯಿಡಾ: ದೇಶದಲ್ಲಿಯೇ ಅತ್ಯಂತ ಅಪರೂಪದ ಅರಣ್ಯ ಹೊಂದಿದ ತಾಲೂಕು ಜೋಯಿಡಾ. ಇಲ್ಲಿಯ ಜನ ತಾವು ಪರಿಸರದ ಒಂದು ಭಾಗ ಎಂದು ಭಾವಿಸಿದ್ದಾರೆ ಎಂದು ಉಳವಿ ಕ್ಷೇತ್ರದ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಶಾಸ್ತ್ರಿ ತಿಳಿಸಿದರು.
ಕಾಳಿ ಹುಲಿ ಕಾಯ್ದಿಟ್ಟ ಅರಣ್ಯದ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.12ನೇ ಶತಮಾನದಲ್ಲಿ ಶಿವಶರಣರು ಈ ಭಾಗದ ಪ್ರಕೃತಿಯನ್ನು ತಮ್ಮ ವಚನಗಳಲ್ಲಿ ಹಾಡಿ ಹೊಗಳಿದ್ದಾರೆ. ಜೊತೆಗೆ ತಾವೂ ಪ್ರಕೃತಿಯ ಭಾಗವೆಂದು ನಂಬಿದ್ದರು. ಪ್ರಕೃತಿಯಲ್ಲಿರುವ ಜೀವಿಗಳಿಗೆ ದಯೆ ಇರಬೇಕು. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದಿದ್ದರು. ಪರಿಸರ ಜೀವಿಗಳೇ ನಮಗೆ ಆಧಾರ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂದಿಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ, ಪರಿಸರ ನಮ್ಮನ್ನೆಲ್ಲ ರಕ್ಷಿಸಿದೆ. ಇದನ್ನು ಅರಿತು ನಾವೇ ಪರಿಸರ ರಕ್ಷಿಸಬೇಕು. ಜಗತ್ತಿನ ಜನ ನಮ್ಮ ಪರಿಸರ, ಪರಿಸರ ಕಾಳಜಿ ನೋಡಿ ಮೆಚ್ಚಬೇಕು ಎಂದರು.ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮೊಕಾಶಿ ಮಾತನಾಡಿ, ಕಾಳಿ ಹುಲಿ ಕಾಯ್ದಿಟ್ಟ ಅರಣ್ಯದ ಗಾಳಿ ನೀರು ಬೆಳಕು ಬಯಸಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅವರಿಗೆ ಮೂಲ ಸೌಕರ್ಯ ಕೊಡಲು ನಾವು ಮತ್ತು ಅರಣ್ಯ ಇಲಾಖೆ ಹಿಂದೆ ಬೀಳಬಾರದು. ಆ ನಿಟ್ಟಿನಲ್ಲಿ ಕೂಡಿ ಕೆಲಸ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಮಾತನಾಡಿ, ಪರಿಸರ ಉಳಿಯಬೇಕು. ಸ್ಥಳೀಯರು ಬದುಕಬೇಕು. ಅರಣ್ಯ ಇಲಾಖೆಗೆ ಸ್ಥಳೀಯರು ಸಹಕರಿಸಿ ನಡೆದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ದೊರೆತು ಅರಣ್ಯ ಸಂರಕ್ಷಣೆಗೆ ಒತ್ತು ಸಿಕ್ಕಂತೆ ಆಗುತ್ತದೆ. ಮುಂದಿನ ಪೀಳಿಗೆಗೆ ಪರಿಸರ ಎಂದರೆ ಏನು ಎಂದು ನಾವು ತಿಳಿಸುವ ಸ್ಥಿತಿ ಬರಬಾರದು. ಬದುಕಿಗೆ ಪರಿಸರ ಎಷ್ಟು ಮುಖ್ಯ ಎಂದು ತಿಳಿದು ಬಾಳಬೇಕು ಎಂದರು .ಪ್ರಾಸ್ತಾವಿಕವಾಗಿ ಮಾತನಾಡಿದ ಶರತ್ ಐಹೊಳೆ ರಾಜ್ಯದ ಹುಲಿ ಯೋಜನೆಗಳ ಮಾಹಿತಿ ನೀಡಿದರು. ಅರಣ್ಯ ಇಲಾಖೆ ನಡೆಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೌರಿಸಿದ್ಧಿ ಅವರಿಂದ ಪರಿಸರ ಗೀತೆ ಮೂಡಿಬಂದಿತು. ವೇದಿಕೆಯಲ್ಲಿ ಪರಿಸರ ಪ್ರಿಯ ಶಿವಪುರದ ಗೋಪಾಲ ಭಟ್ ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ, ಪರಿಸರ ಸಮಿತಿ ಅಧ್ಯಕ್ಷ ಗಜಾನನ ಡೆವಳಿ ಇತರರು ಇದ್ದರು. ಇಲಾಖೆಯ ಪ್ರಶಾಂತ್ ಮತ್ತಿತರರು ಕಾರ್ಯಕ್ರಮ ನಡೆಸಿಕೊಟ್ಟರು.ಇಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರವಾಸ
ಕಾರವಾರ: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅ. 9ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಬೆಳಗ್ಗೆ 10 ಗಂಟೆಗೆ ದಾಂಡೇಲಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿ ಗೃಹ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಬೆಳಗ್ಗೆ 11 ಗಂಟೆಗೆ ದಾಂಡೇಲಿಯ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯುವ ಕೆನರಾ ವೃತ್ತದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವವರು. ಮಧ್ಯಾಹ್ನ 2.30 ಗಂಟೆಗೆ ಲಾಗಿಂಗ್ ಪ್ರದೇಶಗಳಿಗೆ ಮತ್ತು ಜಿಟಿಡಿ ದಾಂಡೇಲಿ ಕ್ಷೇತ್ರಕ್ಕೆ ಭೇಟಿ ಹಾಗೂ 3 ಗಂಟೆಗೆ ಕುಂಬಾರವಾಡ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ವಯಂ ಚಟುವಟಿಕೆಗಳ ಪರಿಶೀಲನೆ ನಡೆಸಲಿದ್ದಾರೆ.