ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯ ಮುಂದೆ ಭಿಕ್ಷಾಪಾತ್ರೆಯಿಟ್ಟಿದೆ, ನಾಚಿಕೆಯಾಗಬೇಕು ಈ ಕಾಂಗ್ರೆಸ್ ನವರಿಗೆ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್ ಹೇಳಿದರು
ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯ ವಾಗುತ್ತೆದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಎನ್‌ಡಿಎ ಅವಧಿಯಲ್ಲೇ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಬಂದಿದೆ. ಇರುವ ದಾಖಲೆಗಳನ್ನು ಜನರ ಮುಂದೆ ಇಡೋಣ ಎಂದು ಸವಾಲು ಹಾಕಿದರು. ರಾಜ್ಯ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿ ಮೊಸಳೆ ಕಣ್ಣೀರು ಹಾಕಿ, ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನವರು ಬೀದಿ ನಾಟಕ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಟಿಕೆಟ್ ಪ್ರಯತ್ನ: ಎರಡು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಸಮುದಾಯದ ಪ್ರಭಾವ ಇದೆ. ಕಳೆದ ವಿಧಾನಸಭೆಯಲ್ಲಿ ಸೋತಿದ್ದಕ್ಕೆ ಲೋಕಸಭಾ ಟಿಕೆಟ್ ಗೆ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದಕ್ಕೆ ಅನ್ಯಾಯವಾಗಿದೆ ಎಂದು ಬೆಂಬಲಿಗರು ಹೇಳ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಇದ್ದಿದ್ರೆ ಜೀವನ ಪೂರ್ತಿ ಶಾಸಕನಾಗಿ ಇರ್ತಿದ್ದೆ ಎಂದು ಬೆಂಬಲಿಗರು ಹೇಳ್ತಿದ್ದಾರೆ.
ಅನೇಕ ವಿಷಯಗಳು ಇವೆ ಬಹಿರಂಗವಾಗಿ ಚರ್ಚೆ ಮಾಡಲು ಹೋಗಲ್ಲ ಎಂದರುತಮಗೆ ಟಿಕೆಟ್ ವಿಚಾರಕ್ಕೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಉತ್ತರಿಸಿದ ಅವರು, ವಿಶ್ವನಾಥ್‌ಗೆ ಅವರ ಮಗನ ಭವಿಷ್ಯ ರೂಪಿಸುವ ಜವಾಬ್ದಾರಿ ಇದೆ. ಎಂಪಿ ಟಿಕೆಟ್‌ಗಾಗಿ ಬಿರಿಯಾನಿ, ಪ್ರವಾಸ, ತೀರ್ಥಯಾತ್ರೆ ಮಾಡಿಸುವ ಅಗತ್ಯ ನನಗೆ ಇಲ್ಲ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಫುರ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಟಿಕೆಟ್‌ಗೆ ಲಾಬಿ ಮಾಡಲ್ಲವೆಂದು ಹೇಳಿದರು. ಟಿಕೆಟ್ ಯಾರಿಗೇ ಕೊಟ್ಟರೂ ಬೆಂಬಲ
ಬಿಜೆಪಿ ಹೈಕಮಾಂಡ್ ವಿಶ್ವನಾಥ್ ಮಗನಿಗೆ ಟಿಕೆಟ್ ನೀಡಿದ್ರೂ ಕೆಲಸ ಮಾಡಲು ಸೈ. ಚಿಕ್ಕಬಳ್ಳಾಫುರ ಜಿಲ್ಲೆಯ ಉಸ್ತುವಾರಿ ತೆಗೆದುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ. ವಿಶ್ವನಾಥ್ ಮಗನಿಗೆ ಹೆಚ್ಚಿನ ಮತಗಳನ್ನು ಕೊಡಿಸಲು ರೆಡಿಯಾಗಿದ್ದೇನೆ ಎಂದು ಹೇಳಿದರು.ಖಾಸಗಿಯಾಗಿ ಮಾತನಾಡಿದ್ದೇನೆ....
ಮಾಜಿ ಸಿಎಂ ಯಡಿಯೂರಪ್ಪ 28 ಲೋಕಸಭಾ ಸ್ಥಾನಗಳಿಗೆ ಟಿಕೆಟ್ ನೀಡಲು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿರುವುದನ್ನು ಪ್ಸ್ತಾಪಿಸಿದ ಡಾ.ಸುಧಾಕರ್, ತಾವೂ ಸಹ ಅದನ್ನೇ ಹೇಳಿದ್ದೇನೆ, ದೇಶದ 543 ಕ್ಷೇತ್ರಗಳಿಗೂ ಮೋದಿಯವರೇ ಅಭ್ಯರ್ಥಿ ಅಂತ ಹೇಳಿದ್ದೀನಿ. ಕಾರ್ಯಕರ್ತರ ಸಭೆಯಲ್ಲಿ ಖಾಸಗಿಯಾಗಿ ಮಾತನಾಡಿದ್ದೇನೆ. ಬಹಿರಂಗವಾಗಿ ಯಾವುದನ್ನು ಹೇಳಿಲ್ಲ. ಆದರೂ ಅದರಲ್ಲಿ ಕೆಲ ತುಣುಕುಗಳು ಮಾತ್ರ ಪ್ರಸಾರ ಆಗಿವೆ.ಅದು ಮಾಧ್ಯಮಗಳಿಗೆ ಹೇಗೆ ಸಿಕ್ತೋ ಗೊತ್ತಿಲ್ಲ ಎಂದರು.
ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಒಡ ಹುಟ್ಟಿದವರಲ್ಲೂ ಭಿನ್ನಾಭಿಪ್ರಾಯ ಇರುತ್ತದೆ. ಪಕ್ಷದಲ್ಲೂ ಭಿನ್ನಾಭಿಪ್ರಾಯ ಸಹಜ. ಚುನಾವಣೆ ಬಂದಾಗ ಪಕ್ಷ ನಿಷ್ಠೆ ಬಿಟ್ಟು ಪಕ್ಷದ ಅಭ್ಯರ್ಥಿ ವಿರುದ್ಧ ಮತ ಹಾಕಬಾರದು. ಹಾಗೆ ಮಾಡಿದರೆ ಬದುಕಿದ್ದು ಸತ್ತಂತೆ. ಲೋಕಸಭೆಯಲ್ಲಾದರೂ ಪ್ರಧಾನಿ ಮೋದಿ ಮುಖ ನೋಡಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.