ಗದಗ/ ಲಕ್ಷ್ಮೇಶ್ವರ : ಸರ್ಕಾರಿ ಕಾಮಗಾರಿಯೊಂದರ ಸಂಬಂಧ ತಮ್ಮದೇ ಮಾಲೀಕತ್ವದ ಆಸ್ಪತ್ರೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಡಾ। ಚಂದ್ರು ಲಮಾಣಿ ಅವರು ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸಚಿವರ ವಿರುದ್ಧ ಬಿಜೆಪಿ ನಾಯಕರು ಲಂಚ, ಭ್ರಷ್ಟಾಚಾರದ ಆರೋಪ ಮಾಡುವ ಹೊತ್ತಿನಲ್ಲೇ ನಡೆದ ಈ ಬೆಳವಣಿಗೆಯಿಂದಾಗಿ ರಾಜ್ಯ ಬಿಜೆಪಿ ತೀವ್ರ ಮುಜುಗರ ಅನುಭವಿಸುವಂತಾಗಿದೆ.
ಜಿಲ್ಲೆಯ ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿಗೆ ₹1 ಕೋಟಿ ರುಪಾಯಿ ಮಂಜೂರಾಗಿತ್ತು. ಈ ಕಾಮಗಾರಿ ವಿಜಯರಾಜ ಪೂಜಾರ ಎನ್ನುವವರು ಗುತ್ತಿಗೆ ಪಡೆದಿದ್ದರು. ಕಾಮಗಾರಿ ಮುಂದುವರಿಸಬೇಕಾದಲ್ಲಿ ಒಟ್ಟು ₹11 ಲಕ್ಷ ಕಮಿಷನ್ (ಶೇ.12ರಷ್ಟು) ಬೇಡಿಕೆಯನ್ನು ಶಾಸಕರು ಇಟ್ಟಿದ್ದರು ಎನ್ನಲಾಗಿದೆ.
ಶನಿವಾರ ಇದೇ ಕಮಿಷನ್ ಹಣದಲ್ಲಿ ಮುಂಗಡವಾಗಿ ₹5 ಲಕ್ಷ ಹಣವನ್ನು ಶಿರಹಟ್ಟಿ ಶಾಸಕ ಡಾ। ಚಂದ್ರು ಲಮಾಣಿ ಅವರ ಒಡೆತನದಲ್ಲಿ ಲಕ್ಷ್ಮೇಶ್ವರದಲ್ಲಿರುವ ಬಾಲಾಜಿ ಆಸ್ಪತ್ರೆಯಲ್ಲಿ ₹4.50 ಲಕ್ಷ ಹಾಗೂ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ₹50 ಸಾವಿರ ಲಂಚದ ಹಣವನ್ನು ಪಡೆಯುವ ವೇಳೆಯಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಧಾರವಾಡ ಮತ್ತು ಗದಗ ಜಿಲ್ಲೆಗಳ ಹಿರಿಯ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಒಟ್ಟು 7 ತಂಡಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯ ವೇಳೆ ಶಾಸಕ ಡಾ। ಚಂದ್ರು ಲಮಾಣಿ ಅವರ ಆಪ್ತ ಸಹಾಯಕ ಮಂಜುನಾಥ ತಳವಾರ ಮತ್ತು ಗುರು ಲಮಾಣಿ ಹಣವನ್ನು ಪಡೆಯುತ್ತಿದ್ದರು ಎನ್ನುವುದು ಬಹಿರಂಗಗೊಂಡಿದ್ದು, ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಸ್ಥಳದಲ್ಲಿದ್ದರು.
ಮೂರು ತಾಸಿಗೂ ಹೆಚ್ಚು ವಿಚಾರಣೆ:
ಮಧ್ಯಾಹ್ನ 2 ಗಂಟೆಗೆ ಲಕ್ಷ್ಮೇಶ್ವರ ಬಾಲಾಜಿ ಆಸ್ಪತ್ರೆಯ ಒಳಗಡೆಯೇ ಈ ದಾಳಿ ನಡೆದಿದ್ದು, ಅಲ್ಲಿಂದ ಮೂರು ಗಂಟೆಗಳಿಗೂ ಹೆಚ್ಚು ಕಾಲ ಶಾಸಕರು ಸೇರಿದಂತೆ ಅವರ ಆಪ್ತ ಸಹಾಯಕರು, ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಯಾರನ್ನೂ ಒಳಗೂ ಬಿಡದೇ, ಒಳಗಿದ್ದ ಶಾಸಕರನ್ನು ಹೊರಗೆ ಬಿಡದೇ ನಿರಂತರ ವಿಚಾರಣೆ ನಡೆಸಿದರು. ಇದರಿಂದಾಗಿ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಯ ಮುಂಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಗೊಂಡು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿಯಾದರೂ ಇನ್ನೂ ವಿಚಾರಣೆ ಮುಂದುವರಿದಿದೆ.
ಭಾರೀ ಬಹುಮತದಲ್ಲಿ ಗೆದ್ದಿದ್ದ ಚಂದ್ರು ಲಮಾಣಿ
2023ರಲ್ಲಿ ಬಿಜೆಪಿಯ ಹಿರಿಯ ನಾಯಕ ರಾಮಣ್ಣ ಲಮಾಣಿ ಅವರಿಗೆ ಟಿಕೆಟ್ ತಪ್ಪಿಸಿ, ಹೊಸ ಮುಖವಾಗಿ ಕಣಕ್ಕಿಳಿದು ಡಾ। ಚಂದ್ರು ಲಮಾಣಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈಗ ಶಾಸಕರಾದ ಮೊದಲ ಅವಧಿಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಅವರಿಗೆ ಮಾತ್ರವಲ್ಲ ರಾಜ್ಯ ಬಿಜೆಪಿ ದೊಡ್ಡ ಹಿನ್ನಡೆಯಾಗಿದ್ದು, ಈ ಪ್ರಕರಣವು ಜಿಲ್ಲೆಯ ರಾಜಕೀಯದ ದಿಸೆಯನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಲೋಕಾಯುಕ್ತರ ಮುಂದಿನ ತನಿಖೆ ಮತ್ತು ಬಿಡುಗಡೆಯಾಗಿರುವ ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ಕುತೂಹಲ ಮೂಡಿಸಿದೆ.
- ಲೋಕಾ ಬಲೆಗೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ । ಬಿಜೆಪಿಗೆ ಮುಜುಗರ
ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ಚೆಕ್‌ಡ್ಯಾಂ, ತಡೆಎಗೋಡೆ ಕಾಮಗಾರಿಗೆ ₹1 ಕೋಟಿ ಬಿಡುಗಡೆ
ಶಾಸಕರಿಗೆ ತಿಳಿಸದೇ ಕಾಮಗಾರಿ ನಡೆಸಿದ ಬಗ್ಗೆ ಗುತ್ತಿಗೆದಾರಗೆ ಶಾಸಕರ ಆಪ್ತರಿಂದ ಆಕ್ಷೇಪ
ಬಳಿಕ 1 ಕೋಟಿ ಮೊತ್ತದ ಕಾಮಗಾರಿಗೆ ಶೇ.11ರಷ್ಟು ಲಂಚ ನೀಡುವಂತೆ ಗುತ್ತಿಗೆದಾರಗೆ ಸೂಚನೆ
ಈ ಬಗ್ಗೆ ಲೋಕಾಯುಕ್ತಕ್ಕೆ ಗುತ್ತಿಗೆದಾರ ದೂರು । ಶನಿವಾರ 5 ಲಕ್ಷ ರು. ಲಂಚ ಸ್ವೀಕಾರ ವೇಳೆ ದಾಳಿ
ದಾಳಿ ವೇಳೆ ಹಣದೊಂದಿಗೆ ಸಿಕ್ಕಿಬಿದ್ದ ಚಂದ್ರು ಲಮಾಣಿ, ಆಪ್ತರಾದ ಮಂಜುನಾಥ್, ಗುರು ವಶಕ್ಕೆ
ಬಿಜೆಪಿಯವ್ರು ಏನಂತಾರೆ
ಬಿಜೆಪಿಯವರು ಬೇರೆಯವರ ಮೇಲೆ ಲಂಚದ ಆರೋಪ ಮಾಡುತ್ತಾರೆ. ಆದರೆ ಈಗ ಬಿಜೆಪಿ ಶಾಸಕರೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಅವರು ಏನನ್ನುತ್ತಾರೆ. ಈ ಬಗ್ಗೆ ಲೋಕಾಯುಕ್ತದವರು ತನಿಖೆ ನಡೆಸಲಿ. ತನಿಖೆಗೆ ಅಡ್ಡಿ ಮಾಡುವುದಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಸ್ವಾಮೀಜಿ ಷಡ್ಯಂತ್ರ:ಬಿಜೆಪಿ ನಾಯಕರಿಂದಆಡಿಯೋ ಬಿಡುಗಡೆ
ದಾಳಿಯ ಬೆನ್ನಲ್ಲೇ ಸಂಜೆಯ ವೇಳೆಗೆ ಶಾಸಕರ ಲಂಚ ಸ್ವೀಕಾರ ಪ್ರಕರಣವು ನಾಟಕೀಯ ತಿರುವು ಪಡೆದಿದೆ. ಬಿಜೆಪಿ ನಾಯಕರು ಇದೊಂದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿ ಹೊಸ ಬಾಂಬ್ ಸಿಡಿಸಿದ್ದಲ್ಲದೇ ಅದಕ್ಕೆ ಪೂರಕವಾದ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಶಿರಹಟ್ಟಿ ಕ್ಷೇತ್ರದ ಸ್ವಾಮೀಜಿಯೊಬ್ಬರು ಶಾಸಕರನ್ನು ಸಿಲುಕಿಸಲು ವ್ಯವಸ್ಥಿತ ರೀತಿಯಲ್ಲಿ ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ಕೈಯಲ್ಲಿ ನೋಟು ಕೊಟ್ಟು ಅದಕ್ಕೆ ಕೆಂಪು ಬಣ್ಣ ಹಚ್ಚಿರುತ್ತಾರೆ ಎಂದಿದ್ದಾರೆ. ಇದು ದಾಳಿಯ ವೇಳೆಯಲ್ಲಿ ಬಹಿರಂಗವಾಗುತ್ತದೆ ಎನ್ನುವುದು ಆಡಿಯೋದಲ್ಲಿದೆ. ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
