ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳಲ್ಲಿ ಮೃತರಾದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 1,12,092ಕ್ಕೂ ಹೆಚ್ಚು ಅನರ್ಹರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಕೈಬಿಡಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳಲ್ಲಿ ಮೃತರಾದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 1,12,092ಕ್ಕೂ ಹೆಚ್ಚು ಅನರ್ಹರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಕೈಬಿಡಲಾಗಿದೆ.
ಈ ಪೈಕಿ 67,869 ಮೃತರ ಖಾತೆಗೆ ಯೋಜನೆಯ ಹಣ ಜಮಾ ಆಗಿರುವುದು ಪತ್ತೆಯಾಗಿದೆ. ಜೊತೆಗೆ, ಐಟಿ-ಜಿಎಸ್ ಟಿ ಪಾವತಿಸುತ್ತಿರುವ 41,848 ಮಹಿಳೆಯರೂ ಯೋಜನೆಯ ಫಲಾನುಭವಿಗಳಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 1,12,092ಕ್ಕೂ ಹೆಚ್ಚು ‘ಗೃಹಲಕ್ಷ್ಮಿ’ಯರ ಹೆಸರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಈ ಪೈಕಿ ದ.ಕ. ಜಿಲ್ಲೆಯಲ್ಲಿ 9,000, ಉಡುಪಿಯಲ್ಲಿ 2,800, ಗದಗದಲ್ಲಿ 1,231, ದಾವಣಗೆರೆಯಲ್ಲಿ 4,000, ಬಾಗಲಕೋಟೆಯಲ್ಲಿ 524, ಮೈಸೂರು ಜಿಲ್ಲೆಯಲ್ಲಿ 18,000, ಉತ್ತರ ಕನ್ನಡದಲ್ಲಿ 6,380, ಹಾವೇರಿಯಲ್ಲಿ 6,346, ಕೊಡಗಿನಲ್ಲಿ 2,687, ಚಿತ್ರದುರ್ಗದಲ್ಲಿ 12,637, ಕೊಪ್ಪಳದಲ್ಲಿ 7,200, ರಾಯಚೂರು ಜಿಲ್ಲೆಯಲ್ಲಿ 1,854, ಶಿವಮೊಗ್ಗದಲ್ಲಿ 8,114, ಬಳ್ಳಾರಿಯಲ್ಲಿ 4,225, ಧಾರವಾಡದಲ್ಲಿ 6,397, ಕಲಬುರಗಿಯಲ್ಲಿ 7,978, ಬೆಂಗಳೂರು ದಕ್ಷಿಣದಲ್ಲಿ 12,719 ‘ಗೃಹಲಕ್ಷ್ಮಿ’ಯರ ಹೆಸರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. 2023ರ ಆಗಸ್ಟ್‌ನಿಂದ ಯೋಜನೆ ಆರಂಭವಾಗಿದ್ದು, ಫಲಾನುಭವಿಗಳು ನಿಯಮಿತವಾಗಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆದರೆ, ಇವರಲ್ಲಿ ಅನೇಕರು ಮೃತಪಟ್ಟಿದ್ದು, ಅವರ ಖಾತೆಗೂ ಹಣ ಸಂದಾಯವಾಗುತ್ತಿತ್ತು. ಜೊತೆಗೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸುತ್ತಿರುವ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿರುವುದು ಪತ್ತೆಯಾಗಿತ್ತು. ಇದನ್ನು ತಡೆಯುವ ಉದ್ದೇಶದಿಂದ ಯೋಜನೆಯ ಅನುಷ್ಠಾನದ ಹೊಣೆ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೃತ ಫಲಾನುಭವಿಗಳ ಪತ್ತೆ ಕಾರ್ಯ ಆರಂಭಿಸಿತ್ತು. ಇದರನ್ವಯ 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 1,12,092ಕ್ಕೂ ಹೆಚ್ಚು ಅನರ್ಹರನ್ನು ಪತ್ತೆ ಹಚ್ಚಲಾಗಿದ್ದು, ಅವರ ಹೆಸರುಗಳನ್ನು ಪಟ್ಟಿಯಿಂದ ಕೈಟ್ಟಿದೆ.
‘ಮೃತ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುವ ಹಣವನ್ನು ಹಿಂಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿ, ಯೋಜನೆ ದುರುಪಯೋಗ ಆಗುವುದನ್ನು ತಪ್ಪಿಸಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಗ್ಯಾರಂಟಿ ದುರ್ಬಳಕೆ ಆರೋಪ ಕುರಿತುಪರಿಶೀಲನೆ: ಸಿಎಂ
‘ಗ್ಯಾರಂಟಿ ಯೋಜನೆಗಳ ದುರ್ಬಳಕೆಯಾಗುತ್ತಿದ್ದು, ಮೃತರ ಹೆಸರಿನಲ್ಲೂ ‘ಗೃಹಲಕ್ಷ್ಮಿ’ ಹಣ ಪಾವತಿಯಾಗುತ್ತಿದೆ, ಅಂಗಡಿಗೂ ಉಚಿತ ವಿದ್ಯುತ್ ಬಳಕೆಯಾಗುತ್ತಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ, ಫೋನ್ ನಂಬರ್ ಬದಲಿದ್ದು, ಫಲಾನುಭವಿಗಳ ಹಣ ಇನ್ಯಾರಿಗೋ ತಲುಪುತ್ತಿದೆ ಎಂಬ ಆರೋಪವಿದೆ, ಅದನ್ನು ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಮತದಾರರಿಗೆ ನಮ್ಮ ಗ್ಯಾರಂಟಿಗಳಿಂದ ಅನುಕೂಲವಾಗಬೇಕು. ಸರಿಯಾದ ಫಲಾನುಭವಿಗೆ ನಮ್ಮ ಗ್ಯಾರಂಟಿ ಯೋಜನೆಯ ಲಾಭವನ್ನು ತಲುಪಬೇಕು ಎಂಬ ನಮ್ಮ ಉದ್ದೇಶ’ ಎಂದರು. ಗೃಹಲಕ್ಷ್ಮಿ ಕಂತು ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿ, ‘ಈ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.
ವಾರದಲ್ಲಿ ‘ಗೃಹಲಕ್ಷ್ಮೀ’ಗೆ ಬರಲಿದೆ ಬಯೋಮೆಟ್ರಿಕ್
ಬೆಂಗಳೂರು: ಕುಟುಂಬದ ತಲಾ ಒಬ್ಬ ಅರ್ಹ ಮಹಿಳೆಗೆ ಮಾಸಿಕ ಎರಡು ಸಾವಿರ ರು. ಪಾವತಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮೀ’ ದುರುಪಯೋಗಕ್ಕೆ ತಡೆ ಹಾಕಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಫಲಾನುಭವಿಗಳು ಅರ್ಜಿ ನವೀಕರಣಗೊಳಿಸುವ ಪ್ರಕ್ರಿಯೆಗೆ ವಾರದಲ್ಲಿ ಚಾಲನೆ ನೀಡಲಿದೆ.

