‘ನನ್ನ ಮತ್ತು ಪ್ರಧಾನಿ ಮೋದಿ ನಡುವಿನ ಬಾಂಧವ್ಯ ಒಂದು ರಾಜ್ಯಸಭೆ ಸ್ಥಾನವನ್ನು ಮೀರಿದ್ದು. ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ. ಆ ಸ್ಥಾನಕ್ಕೆ ನಾನು ಬೇಡಿಕೆ ಸಹ ಇಟ್ಟಿರಲಿಲ್ಲ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ‘ನನ್ನ ಮತ್ತು ಪ್ರಧಾನಿ ಮೋದಿ ನಡುವಿನ ಬಾಂಧವ್ಯ ಒಂದು ರಾಜ್ಯಸಭೆ ಸ್ಥಾನವನ್ನು ಮೀರಿದ್ದು. ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ. ಆ ಸ್ಥಾನಕ್ಕೆ ನಾನು ಬೇಡಿಕೆ ಸಹ ಇಟ್ಟಿರಲಿಲ್ಲ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಪ್ಪತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನ ಸವೆಸಿರುವ ನನಗೆ ರಾಜ್ಯಸಭೆ ಸದಸ್ಯನಾಗಬೇಕು ಎಂಬ ವ್ಯಾಮೋಹವಿಲ್ಲ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರಕ್ಕಿಂತ ಜನಸೇವೆಗೆ ಪ್ರಾಮುಖ್ಯತೆ ಕೊಟ್ಟಿದ್ದೇನೆ ಎಂದರು.

ರಾಜ್ಯಸಭೆ ಸ್ಥಾನದ ವಿಚಾರ ಸಂಬಂಧ ಕಳೆದೆರಡು ದಿನಗಳಿಂದ ಅನಗತ್ಯ ಚರ್ಚೆಯಾಗುತ್ತಿದೆ. ಕೆಲವರು ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ನನಗೆ ಅಪಮಾನವಾಗಿದೆ ಎಂಬ ಹೇಳಿಕೆಗಳಿಗೆ ಯಾವುದೇ ಮಹತ್ವ ನೀಡುವುದಿಲ್ಲ. ಅದರಲ್ಲಿ ಯಾವುದೇ ಅರ್ಥವೂ ಇಲ್ಲ ಎನ್ನುವ ಮುಖಾಂತರ ರಾಜ್ಯಸಭಾ ಸ್ಥಾನ ಕುರಿತ ಚರ್ಚೆಗೆ ತೆರೆ ಎಳೆದರು.

ಉತ್ತಮ ಬಾಂಧವ್ಯ ಇದೆ:

ನನ್ನ ಮತ್ತು ಪ್ರಧಾನಿ ಮೋದಿ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಒಂದು ರಾಜ್ಯಸಭೆ ಸ್ಥಾನ ಇಂತಹ ಉತ್ತಮ ಬಾಂಧವ್ಯವನ್ನು ಹಾಳು ಮಾಡುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಮೂರ್ಖತನ. ಒಂದು ಕಾಲದಲ್ಲಿ ನಾನು ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದೆ ಎಂಬುದು ನಿಜ. ಆದರೆ ಕಳೆದ ಹಲವು ವರ್ಷಗಳಿಂದ ನಾನು ಅವರನ್ನು ಬಹಳಷ್ಟು ಅರ್ಥ ಮಾಡಿಕೊಂಡಿದ್ದೇನೆ. ಅವರಲ್ಲಿ ವಿಶ್ವಾಸ ಇರಿಸಿದ್ದೇನೆ. ಅವರ ಒಳ್ಳೆಯ ಕೆಲಸಗಳನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದ್ದೇನೆ ಎಂದು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದರು.

ಮೋದಿ ಜೊತೆಗೆ ವೈಯಕ್ತಿಕ ಬಾಂಧವ್ಯ:

ನಾನು ಸುಮ್ಮನೆ ಕೂರುವುದಿಲ್ಲ. ಪಕ್ಷದ ಬಲವರ್ಧನೆಗೆ ನನ್ನ ಶಕ್ತಿ ಮೀರಿ‌ ಕೆಲಸ‌ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ನೇರವಾಗಿ ಮಾತನಾಡಿದ್ದೇನೆ. ಮೋದಿ ಅವರ ಬಗ್ಗೆ ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಗೌರವಭಾವ ಇದೆ. ಅವರ ಮಟ್ಟಕ್ಕೆ ಯಾವ ನಾಯಕನು ಬೆಳೆಯಲು ಸಾಧ್ಯವಿಲ್ಲ. ಅವರೊಂದಿಗೆ ನಾನು ವೈಯಕ್ತಿಕ ಬಾಂಧವ್ಯ ಹೊಂದಿದ್ದೇನೆ. ರಾಜಕೀಯ ಕಾರಣಕ್ಕಾಗಿ ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ನಾನು ಸಂಸತ್ತಿನಲ್ಲಿ ಇರಲಿ ಅಥವಾ ಇಲ್ಲದಿರಲಿ ನಮ್ಮಿಬ್ಬರ ಸಂಬಂಧಕ್ಕೆ ಧಕ್ಕೆ ಬರುವುದಿಲ್ಲ ಎಂದು ದೇವೇಗೌಡರು ಹೇಳಿದರು.

ನಾನೇಲ್ಲೂ ಬೇಡಿಕೆ ಇಟ್ಟಿರಲಿಲ್ಲ:

‘ಬಿಜೆಪಿಯಿಂದ ದೇವೇಗೌಡರಿಗೆ ಅಪಮಾನ’ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೋದಿ ಅವರ ವಿಶ್ವಾಸದ ಮುಂದೆ ಇವರೆಲ್ಲರ ಹೇಳಿಕೆಗಳು, ಟೀಕೆ-ಟಿಪ್ಪಣಿಗಳು ಬಹಳ ಸಣ್ಣವು. ಕೆಲವರು ನನ್ನ ಬಗ್ಗೆ ಕಾಳಜಿಯಿಂದ ಮಾತನಾಡುತ್ತಿದ್ದಾರೆ. ಬಹಳ ಅಪಮಾನವಾಯಿತು ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ. ನನ್ನ ಹೆಸರು ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಬಿಟ್ಟರೆ, ನನಗೆ ರಾಜ್ಯಸಭೆ ಸ್ಥಾನ ಬೇಕೆಂದು ಎಲ್ಲೂ ಬೇಡಿಕೆ ಇಟ್ಟಿರಲಿಲ್ಲ. ಕಾಂಗ್ರೆಸ್ ಪಕ್ಷದ ಸ್ನೇಹಿತರು ಮಾತ್ರ ಇದನ್ನೇ ದೊಡ್ಡದಾಗಿ ಬಿಂಬಿಸಿ, ಅದಕ್ಕೆ ರಾಜಕೀಯ ಬಣ್ಣ ಲೇಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ

ಜೆಡಿಎಸ್‌-ಬಿಜೆಪಿ ಮೈತ್ರಿ: ಎಚ್‌ಡಿಡಿ

ರಾಜ್ಯದಲ್ಲಿ ಜೆಡಿಎಸ್‌ ಬೆಳವಣಿಗೆಗೆ ಏನು ಬೇಕೋ ಅದನ್ನು ಮಾಡುತ್ತೇನೆ. ಅದಕ್ಕೆ ಯಾರ ಹಂಗೂ ಇಲ್ಲ. ನಿರ್ಭಯವಾಗಿ ಪಕ್ಷ ಸಂಘಟಿಸುತ್ತೇವೆ. ಮುಂಬರುವ ಜಿಬಿಎ, ಜಿಪಂ, ತಾಪಂ, ಗ್ರಾಪಂ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸೀಟು ಹೋಂದಾಣಿಕೆ ಕುರಿತು ಜೆಡಿಎಸ್‌-ಬಿಜೆಪಿ ನಡುವೆ ಮೈತ್ರಿಯಾಗಬೇಕು. ಅವರು ಕರೆದಾಗ ಹೋಗುತ್ತೇನೆ. ಎಲ್ಲಿ ನನ್ನ ಅವಶ್ಯಕತೆ ಇದೆಯೋ ಅಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡರು ತಿಳಿಸಿದರು.

ರಾಜ್ಯಸಭೆಯ ವಿಚಾರದಲ್ಲಿ ನನ್ನ ಬಗ್ಗೆ ಅನುಕುಂಪದ ನಾಟಕ ಆಡುತ್ತಿರುವ ಕಾಂಗ್ರೆಸ್‌ ನಾಯಕರು ಹಿಂದೆಲ್ಲಾ ನನ್ನ ವಿಚಾರದಲ್ಲಿ ಹೇಗೆಲ್ಲಾ ನಡೆದುಕೊಂಡರು ಎಂಬುದು ಗೊತ್ತಿದೆ. ಈಗ ಆ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ.

- ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಗೌಡರು ಹೇಳಿದ್ದು

- ರಾಜ್ಯಸಭಾ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ

- ಆ ಸ್ಥಾನಕ್ಕೆ ನಾನು ಬೇಡಿಕೆಯನ್ನೂ ಇಟ್ಟಿರಲಿಲ್ಲ

- ಆ ಸ್ಥಾನದ ವಿಚಾರದಲ್ಲಿ ಅನಗತ್ಯ ಚರ್ಚೆ ಆಗುತ್ತಿದೆ

- ಕೆಲವರು ಆ ಬಗ್ಗೆ ಅನಗತ್ಯವಾಗಿ ಮಾತನಾಡ್ತಿದ್ದಾರೆ

- ಅವಮಾನವಾಗಿದೆ ಎಂಬ ಮಾತಿಗೆ ಮಹತ್ವ ನೀಡಲ್ಲ

- ರಾಜ್ಯಸಭಾ ಸ್ಥಾನ ಕುರಿತ ಚರ್ಚೆಗೆ ತೆರೆ ಎಳೆದ ಎಚ್ಡಿಡಿ