ಮೋದಿ ಅವರು ಪ್ರಜಾಪ್ರಭುತ್ವ ಅಣಕ ಮಾಡುತ್ತಿರುವುದಕ್ಕೆ ಮಧ್ಯಪ್ರದೇಶದ ರಾಜ್ಯಸಭೆ ಚುನಾವಣೆ ಅಕ್ರಮವೇ ಜ್ವಲಂತ ಉದಾಹರಣೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಭಾರತದ ಪ್ರಜಾಪ್ರಭುತ್ವ ಹಾಳುಗೆಡಹುವ ಮೂಲಕ ಮೋದಿ ದೀರ್ಘಾವಧಿ ಪ್ರಧಾನಿ ಆಗಿದ್ದಾರೆ. ಬಿಜೆಪಿಯವರು ಈ ಸಾಧನೆ ಬಗ್ಗೆ ಸಂಭ್ರಮಿಸುತ್ತಿರುವುದು ಪ್ರಜಾಪ್ರಭುತ್ವದ ಅತಿದೊಡ್ಡ ಅಣಕ. ಮೋದಿ ಅವರು ಪ್ರಜಾಪ್ರಭುತ್ವ ಅಣಕ ಮಾಡುತ್ತಿರುವುದಕ್ಕೆ ಮಧ್ಯಪ್ರದೇಶದ ರಾಜ್ಯಸಭೆ ಚುನಾವಣೆ ಅಕ್ರಮವೇ ಜ್ವಲಂತ ಉದಾಹರಣೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.ನರೇಂದ್ರ ಮೋದಿ ಸರ್ಕಾರ ಮತಗಳ್ಳತನವನ್ನು ಅಧಿಕೃತ ದಂಧೆಯನ್ನಾಗಿಸಿಕೊಂಡಿದೆ. ಎಸ್‌ಐಆರ್ ಸೇರಿ ಅನೇಕ ಕಳ್ಳಮಾರ್ಗದ ಮೂಲಕ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ. ಇದೀಗ ಮತಗಳ್ಳತನಕ್ಕೆ ರಾಜ್ಯಸಭೆ ಸ್ಥಾನಗಳ ಕಳ್ಳತನವೂ ಸೇರಿದೆ. ಮತದಾರರ ದಿಕ್ಕು ತಪ್ಪಿಸುವುದು, ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು, ಕುದುರೆ ವ್ಯಾಪಾರ ನಡೆಸುವುದು, ಸ್ವತಂತ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಸ್ಥಾನಗಳ್ಳತನ ನಡೆಸುವುದು. ಹೀಗೆ ಪ್ರಜಾಪ್ರಭುತ್ವ ಹಾಳುಗೆಡುವ ಮೂಲಕ ಮೂಲಕ ಮೋದಿ ದೀರ್ಘಾವಧಿ ಪ್ರಧಾನಿ ಆಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಚುನಾವಣಾ ಅಕ್ರಮ, ರಾಜಕೀಯ ಷಡ್ಯಂತ್ರ:ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರೂ ಆದ ಸಿದ್ದರಾಮಯ್ಯ ಅವರು, ‘ಮೋದಿ ಅವರು ಪ್ರಜಾಪ್ರಭುತ್ವದ ಅಣಕ ಮಾಡುತ್ತಿರುವುದಕ್ಕೆ ಮಧ್ಯಪ್ರದೇಶ ರಾಜ್ಯಸಭೆ ಚುನಾವಣೆಯೇ ಜ್ವಲಂತ ಉದಾಹರಣೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಮೋದಿಯವರ ಕಪಿಮುಷ್ಟಿಯಲ್ಲಿರುವ ಚುನಾವಣಾ ಆಯೋಗವು ತಿರಸ್ಕಾರ ಮಾಡಿದೆ.
ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿರಲಿಲ್ಲ. ಆದರೂ ಕೆಲ ಲೋಪದೋಷಗಳನ್ನು ಸೃಷ್ಟಿ ಮಾಡಿ ತಿರಸ್ಕಾರ ಮಾಡಲಾಗಿದೆ. ಇದು ಸ್ಪಷ್ಟ ಚುನಾವಣಾ ಅಕ್ರಮ ಹಾಗೂ ರಾಜಕೀಯ ಷಡ್ಯಂತ್ರ ಎಂದು ಸಿದ್ದರಾಮಯ್ಯ ದೂರಿದ್ದಾರೆ.ಷಡ್ಯಂತ್ರಕ್ಕಾಗಿಯೇ 3ನೇ ಅಭ್ಯರ್ಥಿ ಕಣಕ್ಕೆ:
ಈ ಷಡ್ಯಂತ್ರ ಮಾಡಲೆಂದೇ ಕೇವಲ ಇಬ್ಬರು ಅಭ್ಯರ್ಥಿಗಳನ್ನಷ್ಟೇ ಗೆಲ್ಲಿಸಿಕೊಳ್ಳಬಹುದಾದ ಸಂಖ್ಯಾಬಲ ಹೊಂದಿದ್ದರೂ 3ನೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ದೊಡ್ಡಮೊತ್ತದ ಹಣದ ಆಮಿಷ ಒಡ್ಡುವ ಮೂಲಕ ಕುದುರೆ ವ್ಯಾಪಾರ ನಡೆಸಲು ತಯಾರಿ ನಡೆಸಿತ್ತು. ಆದರೆ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದರಿಂದ ಬಿಜೆಪಿಯ ಕುದುರೆ ವ್ಯಾಪಾರ ನಡೆಯಲಿಲ್ಲ. ಹಾಗಾಗಿ ಕೊನೆಯ ಅಸ್ತ್ರ ಎಂಬಂತೆ ಚುನಾವಣಾ ಆಯೋಗದ ಮೂಲಕ ಅಭ್ಯರ್ಥಿ ನಾಮಪತ್ರವೇ ನೇರವಾಗಿ ತಿರಸ್ಕೃತಗೊಳ್ಳುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.ಮೀನಾಕ್ಷಿ ವಿರುದ್ಧ ಇಲ್ಲ ಕ್ರಿಮಿನಲ್ ಕೇಸ್:
ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರವು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾದ ನಡೆ. ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಒಂದು ಖಾಸಗಿ ದೂರು ಅಪರಾಧ ಪ್ರಕರಣವಾಗುವುದಿಲ್ಲ. ಪ್ರಸ್ತುತ ಅವರಿಗೆ ನ್ಯಾಯಾಲಯದಿಂದ ಶೋಕಾಸ್ ನೋಟಿಸ್ ಮಾತ್ರವೇ ಬಂದಿದ್ದು, ಅದನ್ನು ಅಫಿಡವಿಟ್‌ನಲ್ಲಿ ಸೇರಿಸುವ ಅಗತ್ಯವಿಲ್ಲ. ಈ ಬಗ್ಗೆ ಚುನಾವಣಾ ಆಯೋಗದ ಸೂಚನೆಗಳೇ ಸ್ಪಷ್ಟವಾಗಿ ಹೇಳಿದ್ದರೂ ಮೀನಾಕ್ಷಿ ಅವರ ನಾಮಪತ್ರ ತಿರಸ್ಕರಿಸಿರುವುದು ಬಿಜೆಪಿಯ ಷಡ್ಯಂತ್ರ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.