ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿದೆ. ಕೆಲ ಮಾದರಿಗಳಲ್ಲಿ ಶೇ.31.2 ರಷ್ಟು ಎಥೆನಾಲ್ ಬಳಕೆಯಾಗಿದ್ದು, ಸಂಬಂಧಪಟ್ಟ ತೈಲ ಕಂಪೆನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು : ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿದೆ. ಕೆಲ ಮಾದರಿಗಳಲ್ಲಿ ಶೇ.31.2 ರಷ್ಟು ಎಥೆನಾಲ್ ಬಳಕೆಯಾಗಿದ್ದು, ಸಂಬಂಧಪಟ್ಟ ತೈಲ ಕಂಪೆನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸಚಿವ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ''''ಮಿಷನ್ ನಿಖರ'''' ಅಡಿ ರಾಜ್ಯಾದ್ಯಂತ ನಡೆಸಿದ ತಪಾಸಣೆಯಲ್ಲಿ ಪ್ರಮುಖ ತೈಲ ಕಂಪನಿಗಳ ಪೆಟ್ರೋಲ್ ಮಾದರಿಗಳಲ್ಲಿ ಆತಂಕಕಾರಿ ಪ್ರಮಾಣದ ಎಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಕೆಲ ಮಾದರಿಗಳಲ್ಲಿ ಶೇ.31.2ರಷ್ಟು ಎಥೆನಾಲ್ ದಾಖಲಾಗಿದ್ದು, ಇದು ನಿಗದಿತ E20 ಮಿತಿಯನ್ನು ಮೀರಿದೆ. ಎಥೆನಾಲ್ ಮಿಶ್ರಣದಿಂದ ಇಂಧನ ಭದ್ರತೆ ಮತ್ತು ಆರ್ಥಿಕ ಲಾಭದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ, ಅದೇ ಹೆಸರಿನಲ್ಲಿ ನಿಗದಿತ ಮಾನದಂಡಗಳ ಉಲ್ಲಂಘನೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮೈಲೇಜ್ ಕಡಿಮೆಯಾಗುತ್ತೆ:
ಪೆಟ್ರೋಲ್ನ ಗುಣಮಟ್ಟದ ಉಲ್ಲಂಘನೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ. ಎಂಜಿನ್ ಹಾನಿ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳದ ಹೊರೆ ಸಾಮಾನ್ಯ ಜನರ ಮೇಲೆ ಬೀಳುವ ಆತಂಕವಿದೆ. ತೈಲ ಕಂಪನಿಗಳು ಲಾಭ ಗಳಿಸುವಾಗ ಅದರ ದುಷ್ಪರಿಣಾಮವನ್ನು ವಾಹನ ಸವಾರರು ಏಕೆ ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.
ದೇಶಾದ್ಯಂತ ಪೂರೈಕೆಯಾಗುವ ಪೆಟ್ರೋಲ್ನಲ್ಲಿನ ನೈಜ ಎಥೆನಾಲ್ ಪ್ರಮಾಣವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು. ನಿಗದಿತ ಮಿತಿ ಉಲ್ಲಂಘಿಸಿರುವ ತೈಲ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪೆಟ್ರೋಲ್ ಬಂಕ್ ಮಟ್ಟದ ತಪಾಸಣಾ ವರದಿಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.
ಪರಿಹಾರ ನಿಧಿ ಸ್ಥಾಪಿಸಿ:
ಇದಲ್ಲದೆ, ಇ-20 ಇಂಧನದಿಂದ ವಾಹನಗಳಿಗೆ ಹಾನಿಯಾಗಿರುವ ಮಾಲೀಕರಿಗೆ ಪರಿಹಾರ ನೀಡಲು ವಿಶೇಷ ''''E20 ಹಾನಿ ಪರಿಹಾರ ನಿಧಿ'''' ಸ್ಥಾಪಿಸಬೇಕು. ಪ್ರತಿ ಪೆಟ್ರೋಲ್ ಬಂಕ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಗ್ರಾಹಕರು ತಮ್ಮ ವಾಹನಗಳಿಗೆ ಸೂಕ್ತವಾದ ಇಂಧನ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಬೇಕು. ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಿ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

