ಕಾರಟಗಿ:ಪಟ್ಟಣದ ನಾಗನಕಲ್ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರಾ ಎಥೆನಾಲ್ ಪ್ರೈವೇಟ್ ಲಿಮಿಟೆಡ್ ಘಟಕ ಸ್ಥಗಿತಗೊಳಿಸಬೇಕು ಎಂದು ನಾಗನಕಲ್ ಗ್ರಾಮಸ್ಥರು ಮಂಗಳವಾರ ಆಗ್ರಹಿಸಿದ್ದಾರೆ.
ಬೇವಿನಾಳ ಗ್ರಾಪಂ ವ್ಯಾಪ್ತಿಯ ನಾಗನಕಲ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರಾ ಎಥೆನಾಲ್ ಘಟಕ ಸ್ಥಗಿತಗೊಳಿಸಿ ಮುಂದೆ ಸಂಭವಿಸಬಹುದಾದ ಅನಾಹುತ ತಡೆಯಬೇಕು ಎಂದು ಒತ್ತಾಯಿಸಿದರು. ಇಲ್ಲಿನ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಸಲ್ಲಿಸಿದರು.ಗ್ರಾಪಂ ಮಾಜಿ ಸದಸ್ಯ ದಾವಲಸಾಬ್ ಮಾತನಾಡಿ, ಎಥನಾಲ್ ಘಟಕದಿಂದ ಹೊರ ಸೂಸುವ ಮಾಲಿನ್ಯದಿಂದ ನಾಗನಕಲ್ ಗ್ರಾಮವಷ್ಟೇ ಸೇರಿದಂತೆ ಸುತ್ತಲಿನ ರಾಮನಗರ, ಚಳ್ಳೂರು ಕ್ಯಾಂಪ್, ಬೇವಿನಾಳ ಗ್ರಾಮ ಹಾಗೂ 3ಕಿಮೀ ಅನತಿ ದೂರದಲ್ಲಿರುವ ಕಾರಟಗಿ ಪಟ್ಟಣಕ್ಕೂ ಇದರಿಂದ ತೊಂದರೆಯುಂಟಾಗಲಿದೆ. ಯಾವುದೇ ಘಟಕ ಸ್ಥಾಪಿಸಬೇಕಾದರೆ ಜನನಿಬಿಡ ಸ್ಥಳದಿಂದ ದೂರದ ಸ್ಥಳದಲ್ಲಿ ಸ್ಥಾಪಿಸಬೇಕು ಎನ್ನುವುದು ಸರ್ಕಾರ ರೂಪಿಸಿರುವ ಕಾನೂನು ಆದರೆ,ಈಗಿನ ಯೋಜಿತ ಕಾರ್ಖಾನೆಯಿಂದ ನಾಗನಕಲ್ ಗ್ರಾಮದ ಘಟಕದ ರಸ್ತೆಯಲ್ಲಿ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನವಲಿ ರಸ್ತೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಗಳಿದ್ದು ಇಲ್ಲಿನ ವಿದ್ಯಾಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಲಿದೆ. ಅಷ್ಟೇ ಅಲ್ಲ, ಈ ಭಾಗದ ಜೀವನಾಡಿ, ತುಂಗಭದ್ರಾ ಎಡದಂಡೆ ಕಾಲುವೆ.ಕಾಗಟಗಿ ತಾಲೂಕಿನ ಬಹುಗ್ರಾಮ ಕುಡಿವ ನೀರಿನ ಕೆರೆ ಇದ್ದು ಘಟಕದ ವಿಸ್ತರಣೆಯಿಂದ ಕಲ್ಲಿದ್ದಲು ಉರಿಸುವುದರಿಂದ ಪರಿಸರ ಮಾಲಿನ್ಯ, ಗಾಳಿ ಮತ್ತು ನೀರಿನ ಗುಣಮಟ್ಟದ ಹಾನಿ, ಭೂಗರ್ಭ ಜಲಮಟ್ಟದ ಕುಸಿತ, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಇಷ್ಟೆಲ್ಲ ನಿಯಮ ಗಾಳಿಗೆ ತೂರಿದ್ದರು, ಪರಿಸರ ಮಾಲಿನ್ಯ ತಡೆಗಟ್ಟಬೇಕಾದ ಜವಾಬ್ದಾರಿಯುತ ಮಾಲಿನ್ಯ ಮಂಡಳಿ ಹೇಗೆ ಅನುಮತಿ ನೀಡಿದೆಯೇ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಚನ್ನನಗೌಡ,ವೀರಭದ್ರ ಗೌಡ ಮತ್ತು ಅಮರೇಶ್ ಪವಾರ್ ಮಾತನಾಡಿ, ಇಂಥದೊಂದು ಅಪಾಯಕಾರಿ ಬೃಹತ್ ಕಾರ್ಖಾನೆ ಆರಂಭಿಸಿದ್ದರೂ ಇಲ್ಲಿನ ಸ್ಥಳೀಯ ಗ್ರಾಮಗಳ ಜನರಿಗೆ ಮುಂಚಿತವಾಗಿ ಇದರ ವಿಷಯ ತಿಳಿಸಿಲ್ಲ ಹಾಗೂ ಸಂಬಂಧಿಸಿದ ಅಧಿಕಾರಿಗಳು ಏಕಾಏಕಿ ಸಭೆ ಮಾಡಿರುತ್ತಾರೆ ಅಲ್ಲದೇ ಸ್ಥಳೀಯ ಜನರ ಬದಲಿಗೆ ಘಟಕದ ಮಾಲೀಕರ ಸಂಬಂಧಿ ಹಾಗೂ ಹಣದ ಪ್ರಭಾವ ಬಳಸಿ ಘಟಕ ಮಾಲೀಕರು ಜನವಸತಿ ಹತ್ತಿರವೇ ಈ ಘಟಕ ಸ್ಥಾಪಿಸುತ್ತಿದ್ದು, ಇದರಿಂದ ಸುತ್ತಲಿನ ಕುಡಿವ ನೀರಿನ ಮೂಲ ಬಳಸುವ ಸಾಧ್ಯತೆ ಇದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಆದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಕ್ಷ್ಮವಾಗಿ ಇನ್ನೊಮ್ಮೆ ಪರಿಶೀಲಿಸಬೇಕಾಗಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಗಮನದಲಿಟ್ಟುಕೊಂಡು, ತುಂಗಭದ್ರಾ ಎಥೆನಾಲ್ ಘಟಕದ ಸಾಮರ್ಥ ಹೆಚ್ಚಳಕ್ಕೆ ಯಾವುದೇ ರೀತಿಯ ಅನುಮತಿ ನೀಡಬಾರದು ಎಂದು ಆಗ್ರಹಿಸುತ್ತಿದ್ದು, ಒಂದು ವೇಳೆ ನಮ್ಮ ಧ್ವನಿಗೆ ಬೆಲೆ ಕೊಡದೇ ನಮ್ಮ ಬದುಕಿನ ಜತೆ ಚೆಲ್ಲಾಟವಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ ಮನವಿ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಾಗರಾಜ ದಳಪತಿ, ಭೀಮಣ್ಣ ಭೋವಿ, ಯಮನೂರಸಾಬ್ ಕಲ್ಮಂಗಿ, ದೇವಪ್ಪ ಮಡಿವಾಳ, ಶ್ಯಾಮೀದಸಾಬ್ ಕನಕಗಿರಿ, ಪಂಪನಗೌಡ ಮೋಕಾಶಿ, ನಾಗರಾಜ ಪನ್ನಾಪುರ, ಭೋಗಪ್ಪ ನವಲಿ, ಸಿದ್ದಪ್ಪ ಪನ್ನಾಪುರ, ಶ್ಯಾಮಣ್ಣ ಕುರುಹೀನಶೆಟ್ಟಿ, ಹನುಮಂತಪ್ಪ ಚಲುವಾದಿ, ಸಿದ್ದಪ್ಪ, ಪಂಪಪಾತಿ ನಾಯಕ, ಪ್ರಭಾಕರ್ ಅಡವಿಬಾವಿ, ಭೀಮೇಶ್ ರಾಗಲಪರವಿ, ಅಭಿಷೇಕ್ ಅದಾಪುರ, ವಿಜಯಕುಮಾರ್ ಗುಂಜಳ್ಳಿ, ಮಲರೆಡ್ದೆಪ್ಪ, ರಾಹುಲ್ ಛಲವಾದಿ, ಮಲ್ಲು ಕುರಿ, ಹನುಮೇಶ್ ಭೋವಿ, ಶಿವಕುಮಾರ್ ತೊಟ್ಟಿಮನಿ, ಅಮರೇಶ್ ಕಾರಟಗಿ, ಕಾಶಿಮ್ ಸಾಬ್, ಮುದಿಯಪ್ಪ ತಳವಾರ, ಸಿದ್ದಪ್ಪ ಸಂಕನಾಳ ಇನ್ನಿತರರು ಇದ್ದರು.