ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂಲಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದಂತಾಗಿದೆ.
ಬೆಂಗಳೂರು : ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂಲಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದಂತಾಗಿದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಂವಾದದ ವೇಳೆ ಮಾತನಾಡಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ, ಯೋಜನೆ ದುರುಪಯೋಗ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಿ. ವಿಶೇಷವಾಗಿ ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ. ನಮ್ಮ ಸಂದೇಶ ನಿಮಗೆ ತಲುಪಬೇಕು. ಹಣವನ್ನು ಎಂದಿಗೂ ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಂದ ಸಾಲದ ಹಣದ ಬಾಬ್ತು ತೆಗೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಎಲ್ಲ ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇನೆ. ಫಲಾನುಭವಿಗಳ ಪೈಕಿ ಶೇ.30ರಿಂದ 35ರಷ್ಟು ಮಂದಿ ಬಳಿ ಬೇರೆ ಬೇರೆ ವ್ಯಕ್ತಿಗಳ ಫೋನ್ ನಂಬರ್ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಫಲಾನುಭವಿಗಳು ತಮ್ಮದೇ ಮೊಬೈಲ್ ಫೋನ್ ಬಳಸಬೇಕು. ಬೇರೆಯವರ ಫೋನ್ ನಂಬರ್ ನೀಡಬಾರದು ಎಂದರು.
1 ಲಕ್ಷ ಕೋಟಿ ಪಾವತಿ ವೇಳೆ ಕಾರ್ಯಕ್ರಮ:
ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡಿದೆ. ಗುರುವಾರ ಸುಮಾರು 7 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಿದ್ದೇನೆ. ಗೃಹಲಕ್ಷ್ಮಿ ಯೋಜನೆಗೆ 86 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯರ ಸಮಾವೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಮೀಟರ್ ಬಡ್ಡಿ ವ್ಯವಹಾರಕ್ಕೆ ಕಡಿವಾಣ:
ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಬಾರದು ಎಂದು ಎಚ್ಚರಿಕೆ ನೀಡುತ್ತಿರುವುದಕ್ಕೆ ಕಾರಣವೇನಿದೆ ಎಂಬ ಪ್ರಶ್ನೆಗೆ, ‘ಕೆಲವರು ಬೆಳಗ್ಗೆ ಮಾರುಕಟ್ಟೆಗೆ ಹೋಗುವಾಗ 2,000 ರು. ಸಾಲ ಪಡೆದು, ಸಂಜೆ ಹಣ ಹಿಂದಿರುಗಿಸುವಾಗ ಶೇ.10 ರಷ್ಟು ನೀಡುವಂಥ ಅತಿಯಾದ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಶೇ.5-10 ರು. ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುವ ಪದ್ಧತಿಯೂ ಇದೆ. ಇಂತಹ ವ್ಯವಹಾರಗಳಿಂದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ಆದರೆ, ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇಂಥ ವ್ಯವಹಾರಗಳಿಗೆ ಒಳಗಾಗದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಅಗತ್ಯಬಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
