ಕೋಲಾರದಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ : ದೇಶವನ್ನು ಒಡೆಯುವ ಹುನ್ನಾರ ಎಂದು ಆರೋಪ

KannadaprabhaNewsNetwork |  
Published : Sep 15, 2024, 01:48 AM ISTUpdated : Sep 15, 2024, 04:24 AM IST
೧೪ಕೆಎಲ್‌ಆರ್-೧೭ಹಿಂದಿ ದಿವಸ ಆಚರಣೆ ವಿರೋಧಿಸಿ ಕರವೇ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಕೋಲಾರದ ಗಾಂಧಿವನದಲ್ಲಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೋಲಾರದಲ್ಲಿ ಹಿಂದಿ ದಿವಸ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಹಿಂದಿ ಹೇರಿಕೆ ದೇಶವನ್ನು ಒಡೆಯುವ ಹುನ್ನಾರ ಎಂದು ಆರೋಪಿಸಿದರು.

  ಕೋಲಾರ  : ಹಿಂದಿ ದಿವಸ ಆಚರಣೆ ವಿರೋಧಿಸಿ ಕರವೇ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ನಗರದ ಗಾಂಧಿವನದಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಹಿಂದಿಯೊಂದೇ ದೇಶವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ದೆಹಲಿಯಲ್ಲಿ ಕುಳಿತ ನಮ್ಮನ್ನಾಳುವ ರಾಜಕಾರಣಿಗಳು ಹೇಳುತ್ತಾರೆ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳು ದೇಶವನ್ನು ಒಡೆಯುತ್ತಿವೆಯೇ ಎಂದು ಪ್ರಶ್ನಿಸಿದರು.

ಭಾವನಾತ್ಮಕ ಸಂಬಂಧ

ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಹೇರುವುದು ಕ್ರೌರ್ಯ ಮತ್ತು ರಾಜಕೀಯ ಗೂಂಡಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ, ಅದು ಯಾವ ಕಾಲಕ್ಕೂ ಆಗಕೂಡದು, ಈ ಥರದ ರಾಜಕೀಯ ದಾದಾಗಿರಿ ನಡೆದಾಗಲೆಲ್ಲ ಜನರು ಸಿಡಿದೆದ್ದು ಪ್ರತಿಭಟಿಸಿದ್ದಾರೆ, ಜನರು ತಾವಾಡುವ ನುಡಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ, ಅವರ ನುಡಿಗೆ ಹೊರತಾದ ಇನ್ಯಾವುದೋ ಅಪರಿಚಿತ ಭಾಷೆಯನ್ನೇ ನೀವು ಆಡಬೇಕು, ಬಳಸಬೇಕು ಎಂಬ ಫರ್ಮಾನು ಹೊರಡಿಸಿದರೆ ಆ ಭಾಷಿಗರ ಸಮುದಾಯ ಬಂಡಾಯವೇಳುತ್ತದೆ ಎಂದು ಎಚ್ಚರಿಸಿದರು.

ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡುವ ಪ್ರಸ್ತಾಪ ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆ ಒಂದು ಭಾಷೆ, ಅದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ, ಇರಬೇಕಾಗಿಯೂ ಇಲ್ಲ ಎಂದರು. ಉದ್ಯೋಗ ಹಕ್ಕಿಗೆ ಧಕ್ಕೆ

ಕೇಂದ್ರ ಸರ್ಕಾರದಡಿಯಲ್ಲಿನ ಉದ್ಯಮಗಳು, ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯ ಹಾಗೂ ಸೇನಾ ನೇಮಕಾತಿಗಳ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸುವ ಮೂಲಕ ಪ್ರಾದೇಶಿಕ ಭಾಷೆ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ಮಾಡಿಕ್, ಪ್ರಧಾನ ಕಾರ್ಯದರ್ಶಿ ಮುನಿರಾಜು, ಎಂ.ಎಸ್.ಶ್ರೀನಿವಾಸ್, ಶಶಿಕುಮಾರ್, ರಾಮ ಪ್ರಸಾದ್, ಯುಸೇನ್, ಮುರಳೀಧರ್, ಎನ್.ವಿ.ಮಂಜುನಾಥ್, ಲೋಕೇಶ್, ಮೆಹಬೂಬ್, ಗಣೇಶ್, ಸಂತೋಷ್, ಸುಮಾ, ನಾಗೇಶ್, ರಾಮಕೃಷ್ಣಪ್ಪ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ