ಕಮಿಷನ್‌ ನೀಡುವಂತೆ ಒತ್ತಾಯಿಸಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ಜೀವ ಬೆದರಿಕೆ ಕೇಸ್‌: ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್‌!

KannadaprabhaNewsNetwork |  
Published : Sep 15, 2024, 01:46 AM ISTUpdated : Sep 15, 2024, 04:29 AM IST
ಮುನಿರತ್ನ ಅರೆಸ್ಟ್‌ | Kannada Prabha

ಸಾರಾಂಶ

ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ಕಮಿಷನ್‌ ನೀಡುವಂತೆ ಒತ್ತಾಯಿಸಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ 

 ಬೆಂಗಳೂರು : ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ 30 ಲಕ್ಷ ರು. ಕಮಿಷನ್‌ ನೀಡುವಂತೆ ಒತ್ತಾಯಿಸಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೋಲಾರ ಸಮೀಪ ಶಾಸಕರನ್ನು ಸಂಜೆ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಶಾಸಕ ಮುನಿರತ್ನ ತಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜ್ ಹಾಗೂ ಜಾತಿ ನಿಂದನೆ ಮಾಡಿರುವುದಾಗಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ದೂರು ನೀಡಿದರು. ಈ ದೂರುಗಳನ್ನಾಧರಿಸಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ದೂರುದಾರರನ್ನು ಶಾಸಕರ ಗೃಹ ಕಚೇರಿಗೆ ಕರೆದೊಯ್ದು ಮಹಜರ್ ನಡೆಸಿದರು. ಅಷ್ಟರಲ್ಲಿ ನಗರ ತೊರೆದಿದ್ದ ಶಾಸಕರ ಬೆನ್ನುಹತ್ತಿದ್ದ ಪೊಲೀಸರು, ಕೊನೆಗೆ ಕೋಲಾರ ಜಿಲ್ಲೆ ನಂಗಲಿ ಸಮೀಪ ಸ್ಥಳೀಯ ಪೊಲೀಸರ ಸಹಕಾರದಲ್ಲಿ ಸೆರೆ ಹಿಡಿದಿದ್ದಾರೆ.

ಇನ್ನು ಗುತ್ತಿಗೆದಾರನಿಗೆ ಮುನಿರತ್ನ ಅವರು ನಿಂದಿಸುವ ಆಡಿಯೋ ಎನ್ನಲಾದ ಆಡಿಯೋ ತುಣುಕು ಸಾಮಾಜಿಕ ಜಾಲತಾಲಗಳಲ್ಲಿ ಬಹಿರಂಗವಾಗಿ ವೈರಲ್ ಆಗಿದೆ. ದಲಿತರು, ಒಕ್ಕಲಿಗರ ಬಗ್ಗೆ ಕೀಳಾಗಿ ಹಾಗೂ ಹೆಣ್ಣುಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡುವ ದನಿ ಆ ಆಡಿಯೋದಲ್ಲಿದೆ.

ಮುನಿರತ್ನ ವಿರುದ್ಧದ ಆರೋಪ:

ಆರ್‌.ಆರ್‌.ನಗರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ ನಂ.42ರ ಲಕ್ಷ್ಮೀದೇವಿ ನಗರದ ಡಿ.ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಪ್ರದೇಶದಲ್ಲಿ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಗುತ್ತಿಗೆಯನ್ನು ಗಂಗಾ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಚಲುವರಾಜು ಪಡೆದಿದ್ದರು. ಮೂರು ವರ್ಷಗಳ ಹಿಂದೆ ತ್ಯಾಜ್ಯ ಸಂಗ್ರಹಣೆ ಸಲುವಾಗಿ 10 ಕಸದ ಆಟೋಗಳನ್ನು ಕೊಡಿಸುವುದಾಗಿ ಹೇಳಿ 20 ಲಕ್ಷ ರು. ಹಣವನ್ನು ಗುತ್ತಿಗೆದಾರನಿಂದ ಮುನಿರತ್ನ ಪಡೆದಿದ್ದರು. ಆದರೆ ಬಿಬಿಎಂಪಿಗೆ ಹೆಚ್ಚುವರಿ ಆಟೋಗಳ ಬಿಡುಗಡೆ ಶಿಫಾರಸು ಪತ್ರ ನೀಡಿರುವುದಾಗಿ ಮುನಿರತ್ನ ಹೇಳಿ ಮೋಸ ಮಾಡಿದರು ಎಂದು ಚಲುವರಾಜ್ ಆರೋಪಿಸಿದ್ದಾರೆ.

ಕಳೆದ ವರ್ಷ ಘನ ತ್ಯಾಜ್ಯ ವಿಲೇವಾರಿ ವಿಚಾರವಾಗಿ ತಮ್ಮ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೆ ನನ್ನನ್ನು ಶಾಸಕರು ಕರೆಸಿದ್ದರು. ಆಗ ಸಭೆ ಮುಗಿದ ಬಳಿಕ ನನ್ನನ್ನು ಪ್ರತ್ಯೇಕವಾಗಿ ತಮ್ಮ ಚೇಂಬರ್‌ಗೆ ಕರೆದೊಯ್ದು ಎಲ್ಲೋ ಮಾಮೂಲಿ ಹಣ ಎಂದು ಶಾಸಕರು ಕೇಳಿದರು. ನಾನು ಕಷ್ಟದಲ್ಲಿದ್ದೇನೆ. ಈಗ ಹಣ ತಂದಿಲ್ಲವೆಂದು ತಿಳಿಸಿದಾಗ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗುತ್ತಿಗೆಯನ್ನು ಬದಲಾಯಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯಲು ಸೂಚಿಸಿದರು.

ಇದಾದ ಕೆಲ ದಿನಗಳ ನಂತರ ಮತ್ತೆ ನನ್ನನ್ನು ಮುನಿರತ್ನ ಕರೆಸಿದರು. ಆಗ ನೀನು ಎಷ್ಟು ವರ್ಷಗಳಿಂದ ಈ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು. ನಾನು ಸುಮಾರು ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆನು. ಅದಕ್ಕೆ 3 ವರ್ಷ ಅಂದರೆ 36 ತಿಂಗಳಾಯಿತು. ಈ ಕೆಲಸದ ಸಲುವಾಗಿ ಪ್ರತಿ ತಿಂಗಳು 1 ಲಕ್ಷ ರು.ನಂತೆ ಒಟ್ಟು 36 ಲಕ್ಷ ಆಗುತ್ತೆ. 30 ಲಕ್ಷ ರು. ಲಂಚ ಕೊಡು ಎಂದು ಶಾಸಕರು ಬೇಡಿಕೆ ಇಟ್ಟರು. ಹಣ ಕೊಡಲು ಕಷ್ಟವಾಗುತ್ತದೆ ಎಂದಿದ್ದಕ್ಕೆ ಮುನಿರತ್ನ ಬಾಯಿಗೆ ಬಂದಂತೆ ಬೈದರು.

ಇದಾದ ನಂತರ ಶಾಸಕರ ಆಪ್ತ ವಸಂತ್ ಕುಮಾರ್ ಹಲ್ಲೆ ನಡೆಸಿದರು ಎಂದು ಚಲುವರಾಜ್ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮುನಿರತ್ನ, ಅವರ ಗನ್ ಮ್ಯಾನ್ ವಿಜಯ್‌ ಕುಮಾರ್ ಹಾಗೂ ವಸಂತಕುಮಾರ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಅಲ್ಲದೆ ಇದೇ ವಿಷಯದಲ್ಲಿ ಮಾಜಿ ಕಾರ್ಪೋರೇಟರ್‌ ವೇಲು ನಾಯ್ಕರ್ ಅವರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ಮತ್ತೊಂದು ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಕೀಯ ಪಿತೂರಿ

ನನ್ನ ತೇಜೋವಧೆ ಮಾಡಲು ಈ ರೀತಿ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ಬಿಟ್ಟು ಬಂದಾಗಿನಿಂದ ಪಿತೂರಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ದಲಿತ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ನನ್ನಿಂದ ರಾಜೀನಾಮೆ ಕೊಡಿಸಿ ಅವರ ಕಡೆಯವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ಪಿತೂರಿಯಿಂದಾಗಿ ನನ್ನ ವಿರುದ್ಧ ದೂರು ನೀಡಲಾಗಿದ್ದು, ಕಾನೂನಿನ ಮೊರೆ ಹೋಗುತ್ತೇನೆ.

- ಮುನಿರತ್ನ, ಬಿಜೆಪಿ ಶಾಸಕ

ಬಿಜೆಪಿಯಿಂದ ಹೊರದಬ್ಬಿ

ದಲಿತ, ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ ನಿಂದಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರ ಹೇಳಿಕೆಗೆ ಬಿಜೆಪಿ ನಾಯಕರು ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳಲಿ. ಇಲ್ಲವೇ ನಾಡಿನ ದಲಿತ ಸಮುದಾಯದ ಬಳಿ ಬಹಿರಂಗ ಕ್ಷಮೆ ಕೇಳಿ ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬಲಿ.

- ಸಿದ್ದರಾಮಯ್ಯ ಮುಖ್ಯಮಂತ್ರಿ

ಬಂಧನ ಏಕೆ?- ಬಿಬಿಎಂಪಿ ಕಸದ ಗುತ್ತಿಗೆದಾರನಿಗೆ ಮುನಿರತ್ನ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಶುಕ್ರವಾರ ವೈರಲ್‌ ಆಗಿತ್ತು- ಕಮಿಷನ್‌ಗಾಗಿ ಮುನಿರತ್ನ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಗುತ್ತಿಗೆದಾರ ಚೆಲುವರಾಜು ದೂರು ನೀಡಿದ್ದರು- ಆಡಿಯೋದಲ್ಲಿ ಜಾತಿ ನಿಂದನೆ ಮಾಡಲಾಗಿದೆ ಎಂದು ಮಾಜಿ ಕಾರ್ಪೋರೇಟರ್‌ ವೇಲು ನಾಯ್ಕರ್‌ ಕೂಡ ದೂರಿದ್ದರು- ಈ ಸಂಬಂಧ ಎರಡು ಎಫ್‌ಐಆರ್‌ ದಾಖಲಾಗಿದ್ದವು. ಇದರ ಬೆನ್ನಲ್ಲೇ ಮುನಿರತ್ನ ಅವರನ್ನು ಬಂಧಿಸಲಾಗಿದೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ