ಕನ್ನಡಪ್ರಭ ವಾರ್ತೆ, ಬೆಂಗಳೂರು
ಪಾರಂಪರಿಕ ಕಲೆಯ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯಶವಂತಪುರದಲ್ಲಿರುವ ಇಲಾಖೆಯ ಒಂದೂವರೆ ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ರಾಜಾಜಿನಗರದ ಡಾ. ಬಿ.ಆರ್. ಅಂಬೇಡ್ಕರ್ ಆಟದ ಮೈದಾನದಲ್ಲಿ 14 ದಿನಗಳ ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಟೆಕ್ಸ್‌ಟೈಲ್ ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ಕೈಮಗ್ಗ ಉತ್ಪನ್ನಗಳು ಹೊರ ರಾಜ್ಯಗಳಲ್ಲಿ ಬೇರೆ ಬೇರೆ ಬ್ರಾಂಡ್‌ಗಳಲ್ಲಿ ಮಾರಾಟವಾಗುತ್ತಿವೆ. ನಮ್ಮದೇ ಉತ್ಪನ್ನಗಳು ಬೇರೆ ರಾಜ್ಯಗಳಿಂದ ಬೇರೆ ಬ್ರಾಂಡ್‌ಗಳ ರೂಪದಲ್ಲಿ ರಾಜ್ಯಕ್ಕೆ ಬರುತ್ತಿವೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಅದಕ್ಕಾಗಿ ಯಶವಂತಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದಲ್ಲಿ ಕೈಮಗ್ಗ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆ, ಕುಂಬಾರಿಕೆ ಸೇರಿದಂತೆ ಎಲ್ಲ ರೀತಿಯ ಪಾರಂಪರಿಕ ಕಲೆಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದು ಹೇಳಿದರು.2026-30 ಅವಧಿಯ ನೂತನ ಜವಳಿ ನೀತಿ ಅಂತಿಮ ಹಂತಕ್ಕೆ ಬಂದಿದೆ. ಮೆಗಾ ಮತ್ತು ಮಿನಿ ಇಂಡಸ್ಟ್ರೀಸ್‌ಗಳನ್ನು ಒಂದೇ ಸೂರಿನ ಅಡಿಯಲ್ಲಿ ತರುವ ಪ್ರಯತ್ನ ನಡೆದಿದೆ. ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಪಿಎಂ ಮಿತ್ರ ನೂಲಿನಿಂದ ಬಟ್ಟೆ ಹಂತದವರೆಗೆ ಎಲ್ಲ ಚಟುವಟಿಕೆಗಳು ಪಾರ್ಕ್‌ನಲ್ಲಿ ಒಂದೇ ಸೂರಿನ ಅಡಿಯಲ್ಲಿ ಬರಲಿವೆ. ಈ ಯೋಜನೆ ಅನುಷ್ಠಾನವಾದರೆ ಕರ್ನಾಟಕದಲ್ಲಿ ಮೈಲಿಗಲ್ಲಾಗಲಿದೆ ಎಂದರು.
ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷ ಬಿ.ಜೆ. ಗಣೇಶ್ ಅವರು ಕೈಮಗ್ಗ ಉತ್ಪನ್ನಗಳು ಸೇರಿ ಸಾಂಪ್ರದಾಯಿಕ ಕಲೆಯ ಎಲ್ಲ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವಂತೆ ಮಾರುಕಟ್ಟೆ ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜವಳಿ ಇಲಾಖೆ ಅಧಿಕಾರಿಗಳಾದ ಪ್ರಭಾ ಕರಣ್, ಪ್ರಕಾಶ್, ಯೋಗೇಶ್ ಉಪಸ್ಥಿತರಿದ್ದರು.