ರಾಜ್ಯದ ವಿವಿಧ ನಿಗಮ-ಮಂಡಳಿಗೆ ಇತ್ತೀಚೆಗೆ ಸದಸ್ಯರು, ನಿರ್ದೇಶಕರ ನೇಮಕ ಮಾಡಿದ್ದ ಎಐಸಿಸಿ, ಸಚಿವ ಸ್ಥಾನ ವಂಚಿತರಾಗಿದ್ದ 12 ಮಂದಿ ಶಾಸಕರು ಸೇರಿ 15 ಮಂದಿಯನ್ನು ವಿವಿಧ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಶನಿವಾರ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರು : ರಾಜ್ಯದ ವಿವಿಧ ನಿಗಮ-ಮಂಡಳಿಗೆ ಇತ್ತೀಚೆಗೆ ಸದಸ್ಯರು, ನಿರ್ದೇಶಕರ ನೇಮಕ ಮಾಡಿದ್ದ ಎಐಸಿಸಿ, ಸಚಿವ ಸ್ಥಾನ ವಂಚಿತರಾಗಿದ್ದ 12 ಮಂದಿ ಶಾಸಕರು ಸೇರಿ 15 ಮಂದಿಯನ್ನು ವಿವಿಧ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಶನಿವಾರ ಪಟ್ಟಿ ಬಿಡುಗಡೆ ಮಾಡಿದೆ.

ಜತೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತನ್ವೀರ್ ಸೇಠ್, ವಿಧಾನಸಭೆ ಸರ್ಕಾರದ ಮುಖ್ಯಸಚೇತಕ ಹುದ್ದೆಗೆ ಬೇಲೂರು ಗೋಪಾಲಕೃಷ್ಣ ಹಾಗೂ ವಿಧಾನಪರಿಷತ್ ಸರ್ಕಾರಿ ಮುಖ್ಯಸಚೇತಕ ಹುದ್ದೆಗೆ ಮಂಜುನಾಥ ಭಂಡಾರಿ ನೇಮಿಸಲು ಅನುಮೋದನೆ ನೀಡಿದೆ. ಆದರೆ ತಮಗೆ ನೀಡಿದ ಹುದ್ದೆ ಬಗ್ಗೆ ತನ್ವೀರ್ ಸೇಠ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಅನುಮೋದನೆಗೊಂಡ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಳುಹಿಸಿದ್ದಾರೆ.

ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಬರೋಬ್ಬರಿ 428 ಮಂದಿಯನ್ನು ನಿರ್ದೇಶಕರು ಮತ್ತು ಸದಸ್ಯರನ್ನಾಗಿ ನೇಮಿಸಿ ಇತ್ತೀಚೆಗಷ್ಟೇ ಆದೇಶ ಹೊರಡಿಸಲಾಗಿತ್ತು. ಬೆನ್ನಲ್ಲೇ ಅಧ್ಯಕ್ಷರ ಪಟ್ಟಿ ಅಂತಿಮಗೊಳಿಸಲಾಗಿದೆ.

ನಿಗಮ-ಮಂಡಳಿಗಳಿಗೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

12 ಶಾಸಕರಿಗೆ ಅಧ್ಯಕ್ಷಗಿರಿ:

15 ಮಂಡಳಿಗೆ 12 ಮಂದಿ ಶಾಸಕರು ಅಧ್ಯಕ್ಷರಾಗಿದ್ದು, ಉಳಿದಂತೆ ಕಲಬುರಗಿ ಮೂಲದ ಕಾಂಗ್ರೆಸ್‌ ನಾಯಕ ಶ್ಯಾಮ್‌ ನಟೇಕರ್, ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ ಅವರ ಮೊಮ್ಮಗ ಹಾಗೂ ಕಾಂಗ್ರೆಸ್‌ ನಾಯಕ ಎಚ್.ಸಿ.ಲಲಿತ್‌ ರಾಘವ್‌, ಚಿಂಚೋಳಿ ಪರಾಜಿತ ಅಭ್ಯರ್ಥಿ ಸುಭಾಷ್‌ ರಾಥೋಡ್‌ ಅವರಿಗೂ ನಿಗಮ-ಮಂಡಳಿ ಅಧ್ಯಕ್ಷ ಪಟ್ಟ ಒಲಿದಿದೆ.

ಅಧ್ಯಕ್ಷ ಹುದ್ದೆ ಪಡೆದ ಶಾಸಕರು

ಮಾಲಿನ್ಯ ನಿಯಂತ್ರಣ ಮಂಡಳಿ ಆನೇಕಲ್‌ ಶಾಸಕ ಬಿ.ಶಿವಣ್ಣ

ಕರ್ನಾಟಕ ರಾಜ್ಯ ಖನಿಜ ನಿಗಮ ಕೆ.ಷಡಕ್ಷರಿ

ಕಟ್ಟಡ, ಕಾರ್ಮಿಕರ ಕಲ್ಯಾಣ ಮಂಡಳಿ ಅಶೋಕ್‌ ಎಂ. ಪಟ್ಟಣ್‌

ಬಿಎಂಟಿಸಿ ಅಧ್ಯಕ್ಷ ಎ.ಆರ್‌.ಕೃಷ್ಣಮೂರ್ತಿ

ರಾಜ್ಯ ಉಗ್ರಾಣ ನಿಗಮ ಹಂಪನಗೌಡ ಬಾದರ್ಲಿ

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಡಿ.ಜಿ.ಶಾಂತನಗೌಡ

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜಿ.ಎಚ್.ಶ್ರೀನಿವಾಸ್

ಕೆಆರ್‌ಡಿಸಿಎಲ್‌ ಅಧ್ಯಕ್ಷ - ಮಹಾಂತೇಶ ಕೌಜಲಗಿ

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಎಸ್.ಎನ್‌. ಸುಬ್ಬಾರೆಡ್ಡಿ

ಕರ್ನಾಟಕ ಕೃಷಿ ಬೆಲೆ ಆಯೋಗ ಎನ್‌.ಎಚ್.ಕೋನರೆಡ್ಡಿ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬಸನಗೌಡ ದದ್ದಲ್‌

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಲ್ಲಮಪ್ರಭು ಪಾಟೀಲ್

ಅಧ್ಯಕ್ಷ ಹುದ್ದೆ ಪಡೆದ ಕೈ ನಾಯಕರು

ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಶ್ಯಾಮ್‌ ನಾಟೇಕರ್‌

ಕರ್ನಾಟಕ ವಿದ್ಯುತ್‌ ಕಾರ್ಖಾನೆ (ಕವಿಕ) ಎಚ್‌.ಸಿ.ಲಲಿತ್ ರಾಘವ್

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಸುಭಾಷ್‌ ರಾಠೋಡ್

ರಾಜಕೀಯ ಕಾರ್ಯದರ್ಶಿ ಸ್ಥಾನ ತೃಪ್ತಿ ಇಲ್ಲ: ತನ್ವೀರ್‌

ಮೈಸೂರು: ನನ್ನ ಹಿರಿತನ, ಅನುಭವಕ್ಕೆ ನನಗೆ ನೀಡಿರುವ ರಾಜಕೀಯ ಕಾರ್ಯದರ್ಶಿ ಸ್ಥಾನ ಸೂಕ್ತವಲ್ಲ. ಅದು ಸೂಕ್ತ ನಿರ್ಧಾರ ಮಾಡುವ ಹುದ್ದೆಯೂ ಅಲ್ಲ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅತೃಪ್ತಿ ಹೊರ ಹಾಕಿದ್ದಾರೆ.ಶನಿವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯ ಹುದ್ದೆ ನನಗಲ್ಲ. ಬೇಡ ಅಂತ ಈ ಹಿಂದೆಯೂ ಹೇಳಿದ್ದೇನೆ. ಸಿಎಂ ಏನು ಹೇಳುತ್ತಾರೋ ನೋಡಿ ನಂತರ ನನ್ನ ಮುಂದಿನ ತೀರ್ಮಾನ ಹೇಳುವೆ ಎಂದು ಹೇಳಿದರು. ಸಚಿವ ಸಂಪುಟದಲ್ಲಿ ಉಳಿದಿರುವ ಸ್ಥಾನಗಳಲ್ಲಿ ನಮ್ಮ ಕೋಟಾವಿಲ್ಲ. ಹಾಗಾಗಿ, ಅದನ್ನು ನಾನು ಕೇಳಲ್ಲ ಎಂದು ತಿಳಿಸಿದರು.

ನನ್ನ ಹಿರಿತನ, ಅನುಭವಕ್ಕೆ ನನಗೆ ನೀಡಿರುವ ರಾಜಕೀಯ ಕಾರ್ಯದರ್ಶಿ ಸ್ಥಾನ ಸೂಕ್ತವಲ್ಲ. ಅದು ಸೂಕ್ತ ನಿರ್ಧಾರ ಮಾಡುವ ಹುದ್ದೆಯೂ ಅಲ್ಲ. ಈ ಹುದ್ದೆ ಬೇಡ ಅಂತ ಈ ಹಿಂದೆಯೂ ಹೇಳಿದ್ದೇನೆ. ಸಿಎಂ ಏನು ಹೇಳುತ್ತಾರೋ ನೋಡಿ ನಂತರ ನನ್ನ ಮುಂದಿನ ತೀರ್ಮಾನ ಹೇಳುವೆ.

ತನ್ವೀರ್‌ ಸೇಠ್‌, ಶಾಸಕ