‘ಹಿರಿಯೂರು ಉಪಚುನಾವಣೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಜೆಡಿಎಸ್‌ಗೇ ಟಿಕೆಟ್ ಬೇಕು ಎನ್ನುವ ಪ್ರತಿಷ್ಠೆ ಅಥವಾ ಆತುರವಿಲ್ಲ. ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದಷ್ಟೇ ನನ್ನ ಅಪೇಕ್ಷೆ
ಬೆಂಗಳೂರು : ‘ಹಿರಿಯೂರು ಉಪಚುನಾವಣೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಜೆಡಿಎಸ್‌ಗೇ ಟಿಕೆಟ್ ಬೇಕು ಎನ್ನುವ ಪ್ರತಿಷ್ಠೆ ಅಥವಾ ಆತುರವಿಲ್ಲ. ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದಷ್ಟೇ ನನ್ನ ಅಪೇಕ್ಷೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
‘ಬಿಡದಿ ಟೌನ್‌ಶಿಪ್, ನೈಸ್ ಹಗರಣ, ಕೆಪಿಎಸ್ಸಿ ಹಾಗೂ ಸ್ಟಿಂಗ್ ಆಪರೇಷನ್ ಸೇರಿ ಅನೇಕ ವಿಚಾರಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದವನು ನಾನೇ. ಅತ್ಯಂತ ಕಟುವಾಗಿ ಸರ್ಕಾರವನ್ನು ಟೀಕಿಸಿ ಅದಕ್ಕೆ ಪ್ರತಿಫಲವಾಗಿ ಅತ್ಯಂತ ಕೆಟ್ಟದಾಗಿ ಬೈಸಿಕೊಂಡವನೂ ನಾನೇ. ಈ ಎಲ್ಲಾ ಮಾಹಿತಿ ಅಮಿತ್ ಶಾ ಅವರಿಗೂ ಇದೆ’ ಎಂದೂ ಅವರು ತೀಕ್ಷ್ಣವಾಗಿ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಗಟ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೇನು ನನ್ನ ವೈರಿಯಲ್ಲ. ನಾವಿಬ್ಬರೂ ಆತ್ಮೀಯ ಸ್ನೇಹಿತರೇ. ಹಿರಿಯೂರು ಉಪ ಚುನಾವಣೆ ಸಂಬಂಧ ಉಭಯ ಪಕ್ಷಗಳ ರಾಜ್ಯ ನಾಯಕರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.
ವಿಧಾನ ಪರಿಷತ್ ಚುನಾವಣೆಯ ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದಂತೆ ಹಿರಿಯೂರು ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬ ಅಪೇಕ್ಷೆಯಿದೆ. ಅದನ್ನೇ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ. ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಅನ್ನೂ ಗೃಹ ಸಚಿವರಿಗೆ ನೀಡಿದ್ದೇನೆ ಎಂದು ಅವರು ಹೇಳಿದರು.
ದೆಹಲಿಯ ಭಾರತ ಮಂಟಪದಲ್ಲಿ ನಡೆದ ಮಂತ್ರಿ ಪರಿಷತ್ ಸಭೆ ಸಂದರ್ಭದಲ್ಲಿ ಅಮಿತ್ ಶಾ ಅವರು ರಾಜ್ಯದ ಬೆಳವಣಿಗೆಗಳ ಕುರಿತು ನನ್ನೊಂದಿಗೆ ಸಂಕ್ಷಿಪ್ತವಾಗಿ ಚರ್ಚಿಸಿ, ಮರುದಿನ ಭೇಟಿಯಾಗುವಂತೆ ತಿಳಿಸಿದ್ದರು. ಅದರಂತೆ ನಾನು ಗುರುವಾರ ಸಂಜೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಹಿರಿಯೂರು ಚುನಾವಣೆ ಸೇರಿ ರಾಜ್ಯದ ಎಲ್ಲಾ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಭೇಟಿ ವೇಳೆ ಅಮಿತ್ ಶಾ ಅವರು ನನಗೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅದರಂತೆಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಮಿತ್ ಶಾರಿಂದ ಕೆಲ ಮಹತ್ವದ ಸೂಚನೆ:
ಭೇಟಿ ವೇಳೆ ಅಮಿತ್ ಶಾ ಅವರು ನನಗೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅದರಂತೆಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ರಾಜ್ಯ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸುತ್ತೇನೆ. ಹಿರಿಯೂರಿನಲ್ಲಿ ಕಾಂಗ್ರೆಸ್ ಪಕ್ಷ ಒಂದೊಂದು ಜಾತಿಗೆ ಒಬ್ಬೊಬ್ಬರು ಮಂತ್ರಿಯನ್ನು ನೇಮಕ ಮಾಡಿದೆ. ಅಧಿಕಾರ, ಹಣಬಲದಿಂದ ಚುನಾವಣೆ ನಡೆಸಲು ಹೊರಟಿದ್ದಾರೆ. ಹೀಗಾಗಿ ನಾವು ಒಗ್ಗಟ್ಟಿನಿಂದ ಎದುರಿಸದಿದ್ದರೆ ಅವರು ಅಡ್ಡಮಾರ್ಗದಲ್ಲಿ ಗೆಲ್ಲುತ್ತಾರೆ ಎಂದರು.
ಅಮಿತ್ ಶಾ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದೇನೆ
ಈ ಎಲ್ಲ ಅಂಶಗಳ ಬಗ್ಗೆ ನಾನು ಅಮಿತ್ ಶಾ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದೇನೆ. ಈ ಕಾರಣಕ್ಕೆ ನಾನು ಇಲ್ಲಿ ನನಗೆ ಯಾವುದೇ ಪ್ರತಿಷ್ಠೆ ಇಲ್ಲ ಎಂದು ಹೇಳಿದ್ದು. ಕ್ಷೇತ್ರದಲ್ಲಿ ನೈಜ ಪರಿಸ್ಥಿತಿ ಏನಿದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದ ಬಿಜೆಪಿ ನಾಯಕರಿಗೂ ಇದನ್ನೇ ಹೇಳಲು ಬಯಸುವುದಾಗಿ ಕುಮಾರಸ್ವಾಮಿ ಹೇಳಿದರು.

