ಜೈನ ಸಮುದಾಯದ ಬಹುದಿನಗಳ ಬೇಡಿಕೆಯಾದ ಜೈನ ನಿಗಮ ಮಂಡಳಿ ಸ್ಥಾಪನೆ ಹಾಗೂ ಇತರೆ ಬೇಡಿಕೆಗಳು ಈಡೇರದಿದ್ದರೆ ತಾವು ದೇಹ ತ್ಯಾಗಕ್ಕೂ ಸಿದ್ಧ ಎಂದು ಆಚಾರ್ಯ ಗುಣಧರನಂದಿ ಮಹಾರಾಜರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜೈನ ಸಮುದಾಯದ ಬಹುದಿನಗಳ ಬೇಡಿಕೆಯಾದ ಜೈನ ನಿಗಮ ಮಂಡಳಿ ಸ್ಥಾಪನೆ ಹಾಗೂ ಇತರೆ ಬೇಡಿಕೆಗಳು ಈಡೇರದಿದ್ದರೆ ತಾವು ದೇಹ ತ್ಯಾಗಕ್ಕೂ ಸಿದ್ಧ ಎಂದು ಆಚಾರ್ಯ ಗುಣಧರನಂದಿ ಮಹಾರಾಜರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತೇರದಾಳದ ಜಿನಸೇನಾಚಾರ್ಯ ವಿದ್ಯಾಮಂಡಳದ ಸಭಾಭವನದಲ್ಲಿ ಗುರುವಾರ ನಡೆದ ಜೈನ ಸಮಾಜದ ಮಹಾಮಂಥನ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಅನೇಕ ಸಚಿವರು ಬೆಂಬಲ ಸೂಚಿಸಿದ್ದರೂ ಸರ್ಕಾರ ಮುಂದಾಗುತ್ತಿಲ್ಲ. ಇದಕ್ಕೆ ನಮ್ಮ ಸಮಾಜದ ಸರ್ವ ಮನಸುಗಳು ಒಂದಾಗುವವರೆಗೂ ಈ ಕಾರ್ಯ ಸಫಲವಾಗದು. ಮುಂದಿನ ಪೀಳಿಗೆಯ ಯುವಕರು, ಇಂದಿನ ಬಡ ಕಟುಂಬಗಳ ಅಭ್ಯುದಯಕ್ಕೆ ನಿಗಮ ಸ್ಥಾಪನೆಯಿಂದ ಮಾತ್ರ ಪರಿಹಾರ ಸಾಧ್ಯ ಎಂದರು.ಜೈನ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವು, ಅಸಹಾಯಕ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ವೈದ್ಯಕೀಯ ಅನುಕೂಲ, ಸಮಾಜದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳ ಕಲ್ಪನೆ ಹಾಗೂ ಅವಕಾಶ ಕಲ್ಪಿಸುವಿಕೆ, ಜೈನ ಮಂದಿರಗಳು, ಧಾರ್ಮಿಕ ಕ್ಷೇತ್ರಗಳ ಹಾಗೂ ತೀರ್ಥಕ್ಷೇತ್ರಗಳ ರಕ್ಷಣೆ, ಸಮಾಜದ ಅನೇಕ ಅಗತ್ಯ ಬೇಡಿಕೆಗಳ ಈಡೇರಿಕೆ ಮತ್ತು ಜೈನ ಸಮಾಜದ ಸವಾಂಗೀಣ ಅಭಿವೃದ್ಧಿಗೆ ಜೈನ ನಿಗಮ ಮಂಡಳಿಯ ಸ್ಥಾಪನೆ ಅಗತ್ಯವಾಗಿದೆ ಎಂದು ಹೇಳಿದರು.

ಆರ್ಥಿಕ ಇಲಾಖೆ ಅನುಮೋದನೆ ಕಾರ್ಯ ಶೇ.80ರಷ್ಟು ಆಗಿದ್ದರೂ ಇನ್ನೂ ಮಾಡಬೇಕಿರುವ ಕೆಲಸಗಳು ಸಾಕಷ್ಟು ಬಾಕಿ ಇವೆ. ಸಮಾಜದ ಮನಸುಗಳು ತಕ್ಷಣ ಎಚ್ಚೆತ್ತುಕೊಂಡು ತಂತಮ್ಮ ಕ್ಷೇತ್ರಗಳ ಚುನಾಯಿತ ಶಾಸಕರ ಗಮನಕ್ಕೆ ತಂದು ಪಕ್ಷಾತೀತವಾಗಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಮುಂದಾಗಬೇಕು. ಡಿ.4ನೇ ತಾರೀಖಿನಿಂದ ಚಿಕ್ಕೋಡಿಯಿಂದ ಬೆಳಗಾವಿವರೆಗೆ ಚಳಿಗಾಲದ ಅಧಿವೇಶನ ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿಯೇ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ದೇಹತ್ಯಾಗಕ್ಕೂ ಸಿದ್ಧರಾಗಿರುವುದಾಗಿ ಪ್ರಕಟಿಸಿದರು.

ಮುಖಂಡ ಸುಶೀಲಕುಮಾರ ಬೆಳಗಲಿ ಮಾತನಾಡಿ, ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಚಾರ್ಯರು ಐನಾಪುರ, ವರೂರ, ಬಸ್ತವಾಡ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನಿಗಮ ಸ್ಥಾಪನೆಗೆ ಆಗ್ರಹಿಸಿ, ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಇದೂವರೆಗೆ ರಾಜ್ಯ ಸರ್ಕಾರ ಸ್ಪಂದಿಸದ ಬಗ್ಗೆ ಖಂಡಿಸಿದರು. ವಜ್ರಕುಮಾರ, ಡಾ.ಮಹಾವೀರ ದಾನಿಗೊಂಡ, ಧೂಳಗೌಡ ಪಾಟೀಲ, ಶೀತಲ ಪಾಟೀಲ, ರಾಜು ಅವರಖೋಡ ಸೇರಿ ಮುಖಂಡರು ಜೈನ ನಿಗಮ ಮಂಡಳಿ ಅಗತ್ಯತೆ ಹಾಗೂ ಅದರ ಅನುಷ್ಠಾನಕ್ಕೆ ಮುಂದಿನ ರೂಪುರೇಷೆಗಳ ಬಗ್ಗೆ ಮಾತನಾಡಿದರು.

ಜೆವಿಎಂ ಪಿಯೂ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಸ್ತಿ ಕಮೀಟಿ ಸದಸ್ಯ ರಾಜೇಂದ್ರ ಮುಧೋಳ ಸ್ವಾಗತಿಸಿದರು. ಡಾ.ಜೀವಂಧರ್ ಆಲಗೂರ ಪ್ರಾಸ್ತಾವಿಕ ಮಾತುಗಳಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನೇಮಿನಾಥ ಜಮಖಂಡಿ, ಸಚಿನ್ ಜಯಪ್ಪನವರ ನಿರೂಪಿಸಿದರು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಅಥಣಿ, ಬಾಗಲಕೋಟೆ, ವಿಜಯಪುರ ಸೇರಿ ಹಲವು ಭಾಗಗಳ ಮುಖಂಡರು, ಶ್ರಾವಕ-ಶ್ರಾವಕಿಯರು, ಮಹಿಳಾ ಮಂಡಳದ ಪ್ರತಿನಿಧಿಗಳು ಉಪಸ್ಥಿತರಿದ್ದರು.