ಕೋಲಾರ : ಹಿಂದೆ ಟಿಪ್ಪು ಸುಲ್ತಾನ್ ಹಿಂದೂಗಳನ್ನು ಕಡಿದು ಕಾವೇರಿ ನದಿಗೆ ಎಸೆದ ರೀತಿಯಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರದ ವಸತಿ ಸಚಿವ ಜಮೀರ್ ಅಹಮದ್ ರೈತರ ಸಾವಿರಾರು ಎಕರೆ ಭೂಮಿಯನ್ನು ವಕ್ಬ್ ಆಸ್ತಿ ಎಂದು ಘೋಷಿಸುವ ಮೂಲಕ ರೈತರ ಕತ್ತು ಹಿಸುಕಲು ಹೊರಟಿದ್ದಾರೆ. ಜಮೀರ್ ಈಗಿನ ಕಾಲದ ಟಿಪ್ಪು ಸುಲ್ತಾನ್ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಏಜೆಂಟನಂತೆ ವರ್ತಿಸುತ್ತಿರುವ ಜಮೀರ್ ಅಹಮದ್ ಖಾನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲಾಧಿಕಾರಿ ಸ್ವಜನಪಕ್ಷಪಾತಿ
ಸಂವಿಧಾನಕ್ಕೆ ಅಪಚಾರ ಎಸಗುವಂತೆ ಹಿಂದೂಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಜಮೀರ್ ಅಹ್ಮದ್ ಭಾರತದಲ್ಲಿ ಇರಲು ನಾಲಾಯಕ್ ಎಂದು ಕಿಡಿ ಕಾರಿದರು. ವಿಜಯಪುರದ ರೀತಿಯಲ್ಲೇ ಕೋಲಾರದಲ್ಲಿಯೂ ಹಿಂದೂಗಳ ದೇವಾಲಯ, ಸರ್ಕಾರದ ಶಾಲೆ ಮತ್ತು ಇತರ ಸರ್ಕಾರಿ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆಲ್ಲ ಜಿಲ್ಲಾಧಿಕಾರಿ ಅಕ್ರಂ ಪಾಷ ಸ್ವಜನಪಕ್ಷಪಾತವೇ ಕಾರಣ ಎಂದು ಮುನಿಸ್ವಾಮಿ ಟೀಕಿಸಿದರು.
ಜಿಲ್ಲೆಯ ಶ್ರೀನಿವಾಸಪುರ ಹಾಗೂ ಮಾಲೂರಿನಲ್ಲಿ ಸರ್ಕಾರಿ ಆಸ್ತಿಯನ್ನೆಲ್ಲ ವಕ್ಫ್ ಬೋರ್ಡ್ ಆಸ್ತಿ ಎಂದು ಸೇರಿಸಲಾಗಿದೆ. ಜಮೀರ್ ಅಹ್ಮದ್ ಮತ್ತು ಅಕ್ರಂ ಪಾಷ ಆಟ ಹೆಚ್ಚು ದಿನ ನಡೆಯುವುದಿಲ್ಲ. ಮುಂದಿನ ಡಿಸೆಂಬರ್‌ನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಕಾಯಿದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. ಅಕ್ರಮವಾಗಿ ಸೇರಿಸಿರುವುದನ್ನೆಲ್ಲ ವಜಾ ಮಾಡಲಾಗುವುದು ಎಂದು ಎಚ್ಚರಿಸಿದರು.
ಮತಕ್ಕಾಗಿ ಮುಸ್ಲಿಮರ ಓಲೈಕೆ
ಮುಸ್ಲಿಮರ ಓಟುಗಳಿಗಾಗಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಇನ್ನೆಂದೂ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅಕ್ರಮವಾಗಿ ವಕ್ಬ್‌ಗೆ ಸೇರಿಸಿರುವ ಎಲ್ಲ ಆಸ್ತಿಯನ್ನೂ ಮತ್ತೆ ರೈತರಿಗೆ ವಾಪಸ್ ಕೊಡುತ್ತೇವೆ ಎಂದು ಮುನಿಸ್ವಾಮಿ ಹೇಳಿದರು.