ಬೆಂಗಳೂರು : ಜೆಡಿಎಸ್ ಶಾಸಕರು ಮಾರಾಟದ ವಸ್ತುವಲ್ಲ, ನಮ್ಮ ಶಾಸಕರು ಯಾವ ಆಮಿಷಕ್ಕೂ ಮಾರು ಹೋಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಕುರಿತು ಚನ್ನಪಟ್ಟಣ ಕ್ಷೇತ್ರದ ವಿಜೇತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರೆಲ್ಲಾ ಒಗ್ಗಟ್ಟಿದ್ದೇವೆ ಎಂಬ ಸಂದೇಶ ರವಾನಿಸಲು ಬುಧವಾರ ವಿಧಾನಸೌಧದಲ್ಲಿ ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಯೋಗೇಶ್ವರ್ ಹೇಳಿಕೆಯನ್ನು ಕಟುವಾಗಿ ಖಂಡಿಸಿ, ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸಿ.ಪಿ.ಯೋಗೇಶ್ವರ್ ಮಾತಿನ ಧಾಟಿಯೇ ಬದಲಾಗಿದೆ ಎಂದು ಹರಿಹಾಯ್ದರು.
ಮೂರು ಕ್ಷೇತ್ರಗಳ ಉಪಚುನಾವಣೆ ಪೈಕಿ ಚನ್ನಪಟ್ಟಣ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಮತದಾರರನ್ನು ಮನವೊಲಿಸಿ ಮತ ಪಡೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ವಾಮಮಾರ್ಗದಿಂದ ಗೆಲುವು ಸಾಧಿಸಿದೆ. ಜಯಗಳಿಸಿದ ನಂತರ ಸಿ.ಪಿ.ಯೋಗೇಶ್ವರ್ ಭಾವನೆಗಳು ಮಾತಿನ ಮೂಲಕ ಹೊರ ಬರುತ್ತಿವೆ. ಜೆಡಿಎಸ್ ಶಾಸಕರೆಲ್ಲಾ ಒಗ್ಗಟ್ಟಾಗಿದ್ದೇವೆ. ಪಕ್ಷದ ಶಾಸಕರು ಮಾರಾಟಕ್ಕಿಲ್ಲ ಎಂದು ಕಿಡಿಕಾರಿದರು.
ಯೋಗೇಶ್ವರ್ ಯಾವತ್ತಿದ್ದರೂ ಮುಳ್ಳೇ ಆಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದನ್ನು ಅರಿತುಕೊಳ್ಳಬೇಕು. ಈವರೆಗೆ ನಮ್ಮ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಜೆಡಿಎಸ್ ಪಕ್ಷವನ್ನು ರಾಜ್ಯದಿಂದ ತೆಗೆದುಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ ಅವರನ್ನು ಉಳಿಸಿಕೊಂಡು ಬಂದ ಪಕ್ಷವಾಗಿದ್ದು, ನಮ್ಮ ಕಾರ್ಯಕರ್ತರ ಪಡೆ ಸದೃಢವಾಗಿದೆ ಎಂದು ಹೇಳಿದರು.
ದೇವೇಗೌಡ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ : ನಮ್ಮ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ರಾಜಕೀಯ ನಿವೃತ್ತಿ ಕೈಗೊಳ್ಳಬೇಕು ಎಂಬ ಯೋಗೇಶ್ವರ್ ಹೇಳಿಕೆ ಸರಿಯಲ್ಲ. ಚುನಾವಣೆಗಳ ಸೋಲಿನಿಂದ ದೇವೇಗೌಡ ಅವರು ಎಂದಿಗೂ ಧೃತಿಗೆಟ್ಟಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗನ ಸೋಲು ಅವರನ್ನು ಅಧೀರರಾಗಿಸಿಲ್ಲ. ದೇವೇಗೌಡ ಅವರು ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಅವರ ಬಗ್ಗೆ ಯೋಗೇಶ್ವರ್‌ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಸುರೇಶ್‌ಬಾಬು ಆಕ್ರೋಶ ವ್ಯಕ್ತಪಡಿಸಿದರು.
ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಉಪಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ನಾಯಕರು ಸಹ ಶ್ರಮಿಸಿದ್ದೆವು. ಆದರೂ ಸೋಲಾಗಿದೆ. ಮತದಾರರ ಮನವೊಲಿಸುವಲ್ಲಿ ವಿಫಲವಾಗಿದ್ದೇವೆ. ಆದರೆ, ಪಕ್ಷ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸುತ್ತೇವೆ. ಜೆಡಿಎಸ್ ಶಾಸಕರನ್ನು ಕರೆತರುತ್ತೇನೆ ಎಂಬ ಯೋಗೇಶ್ವರ್ ಹೇಳಿಕೆ ಕೇವಲ ಮಾತಿಗಷ್ಟೇ ಇರುತ್ತದೆ. ಈ ಹಿಂದೆ ಬಿಜೆಪಿಯಲ್ಲಿದ್ದ ಅವರು ಕಾಂಗ್ರೆಸ್‌ನಿಂದ 30 ಶಾಸಕರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದ್ದರು. ಯೋಗೇಶ್ವರ್ ಬಗ್ಗೆ ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಇರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಚ್.ಡಿ.ರೇವಣ್ಣ, ಎ.ಮಂಜು, ಟಿ.ಎ.ಶರವಣ, ಜವರಾಯಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿ.ಟಿ.ದೇವೇಗೌಡ ಸೇರಿ 12 ಎಮ್ಮೆಲ್ಲೆಗಳು ಗೈರು
ಜೆಡಿಎಸ್ ಶಾಸಕರನ್ನು ಸೆಳೆಯುವ ಕುರಿತು ಚನ್ನಪಟ್ಟಣ ವಿಜೇತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆ ಖಂಡಿಸಿ ಜೆಡಿಎಸ್ ಒಗ್ಗಟ್ಟು ಪ್ರದರ್ಶನಕ್ಕೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನಿರೀಕ್ಷೆಯಂತೆ ಗೈರಾಗಿದ್ದರು. ಅಷ್ಟೇ ಅಲ್ಲ, ಇನ್ನೂ ಹಲವು ಶಾಸಕರು ಕೂಡ ಭಾಗಿಯಾಗಿರಲಿಲ್ಲ.
18 ಎಮ್ಮೆಲ್ಲೆಗಳ ಪೈಕಿ ಎ. ಮಂಜು, ಸುರೇಶಗೌಡ, ಎಚ್.ಡಿ. ರೇವಣ್ಣ, ಸ್ವರೂಪ್, ಹರೀಶಗೌಡ, ರವಿಕುಮಾರ್ (6 ಜನ) ಪಾಲ್ಗೊಂಡಿದ್ದರು, 3 ಎಂಎಲ್‌ಸಿಗಳಾದ ತಿಪ್ಪೇಸ್ವಾಮಿ, ಜವರಾಯಿಗೌಡ, ಟಿ.ಎ. ಶರವಣ ಪಾಲ್ಗೊಂಡಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ದಿಢೀರ್ ಪತ್ರಿಕಾಗೋಷ್ಠಿ ನಡೆಸಿದರಿಂದ ಬರಲು ಸಾಧ್ಯವಾಗಿಲ್ಲ. ತಮ್ಮ ಕ್ಷೇತ್ರದಲ್ಲಿ ಶಾಸಕರು ಈ ಬಗ್ಗೆ ಮಾತನಾಡಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದರು.
ಜಿ.ಟಿ.ದೇವೇಗೌಡ ಅವರು ಪಕ್ಷದ ಮುಖಂಡರ ಬಗ್ಗೆ ಮುನಿಸಿಕೊಂಡಿರುವುದರಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕೆಲವರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬೇಸರವಿದೆ.
- ಕಾಂಗ್ರೆಸ್ ಆಮಿಷಕ್ಕೆ ನಾವು ಮಾರುಹೋಗುವುದಿಲ್ಲ: ಸುರೇಶ್ ಬಾಬು ಕಿಡಿ
- ದಳ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವೆನೆಂಬ ಸಿಪಿವೈ ಹೇಳಿಕೆಗೆ ಆಕ್ರೋಶ