ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಗಿಳಿಯುವರೆಂಬ ವದಂತಿಗಳ ನಡುವೆ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಸದ್ದಿಲ್ಲದೆ ಚುನಾವಣಾ ಪೂರ್ವ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಅವಿರತವಾಗಿ ಮುನ್ನಡೆದಿದ್ದಾರೆ. ಬಿಜೆಪಿಯವರೊಂದಿಗೆ ಕೇಸರಿ ಶಾಲು ಹಾಕಿಕೊಂಡು ಮಿತ್ರ ಪಕ್ಷದವರ ವಿಶ್ವಾಸವನ್ನು ಗಳಿಸುವ ಪ್ರಯತ್ನದಲ್ಲಿ ತೊಡಗಿರುವುದು ವಿಶೇಷವಾಗಿದೆ.
ಸುಮಲತಾ ಬಿಗಿಪಟ್ಟು:ಹಾಲಿ ಸಂಸದೆ ಸುಮಲತಾ ಅವರು ನಾನು ಸ್ಪರ್ಧಿಸುವುದಾದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ಅಲ್ಲಿಯೇ ತಮಗೆ ಅವಕಾಶ ನೀಡಬೇಕು. ಬೇರಾವುದೇ ಕ್ಷೇತ್ರದ ಟಿಕೆಟ್ ನೀಡಿದರೆ ನಾನು ಒಪ್ಪುವುದಿಲ್ಲ. ನಾನು ಹಾಲಿ ಮಂಡ್ಯ ಸಂಸದೆ. ಹಾಲಿ ಸಂಸದರಿಗೇ ಟಿಕೆಟ್ ನೀಡುವಂತೆ ನನಗೆ ಅವಕಾಶ ನೀಡಬೇಕೆಂಬ ಬಿಗಿಪಟ್ಟನ್ನು ಬಿಜೆಪಿ ವರಿಷ್ಠರ ಮುಂದಿಟ್ಟಿದ್ದಾರೆ.
ಕ್ಷೇತ್ರ ಹಂಚಿಕೆ ಸಮಯದಲ್ಲಿ ಒಮ್ಮೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿ ಸುಮಲತಾ ಅವರಿಗೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಟಿಕೆಟ್ ಸಿಗದಿದ್ದರೆ ಆಗ ಅವರು ರಾಜಕೀಯವಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ರಹಸ್ಯವಾಗಿ ಉಳಿದಿದೆ. ಬಿಜೆಪಿ ವರಿಷ್ಠರ ಮನವೊಲಿಕೆ ಮಾತಿಗೆ ಮಣಿದು ತಮ್ಮ ನಿರ್ಧಾರ ಬದಲಿಸುವರೋ ಅಥವಾ ಅದನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರುವ ನಿರ್ಧಾರ ಮಾಡುವರೋ ಅಥವಾ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಹಸ ಮಾಡುವರೋ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.
ಇನ್ನೊಂದೆಡೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯನವರು ತಮಗೇ ಬಿಜೆಪಿ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಇದಕ್ಕಾಗಿ ಫೆ.೨ರಂದು ಮಂಡ್ಯದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮಾವೇಶ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ೨೦೧೮ರ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮೊದಲಬಾರಿಗೆ ೨.೪೪ ಲಕ್ಷ ಮತಗಳನ್ನು ಗಳಿಸಿಕೊಟ್ಟಿದ್ದಾರೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷದ ಬೆಂಬಲಿತ ಅಭ್ಯರ್ಥಿ ಸುಮಲತಾ ಬೆಂಬಲಕ್ಕೆ ನಿಂತು ಗೆಲುವಿಗೆ ಶ್ರಮಿಸಿದ್ದಾರೆ. ಈ ಚುನಾವಣೆಯಲ್ಲಿ ಡಾ. ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು, ಅಭಿಮಾನಿಗಳು ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ.
ಜೆಡಿಎಸ್ ಪಾಲಾಗದಂತೆ ತಡೆಗೆ ಕಸರತ್ತು:
ಮಂಡ್ಯದೊಳಗೆ ಜೆಡಿಎಸ್ ೧ ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದ್ದು, ೬ ಕ್ಷೇತ್ರಗಳಲ್ಲಿ ಸೋಲನುಭವಿಸಿದೆ. ಜೆಡಿಎಸ್‌ಗೆ ಸರಿಸಮನಾಗಿ ಬಿಜೆಪಿ ಪ್ರಾಬಲ್ಯ ವೃದ್ಧಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಪರವಾದ ಮತದಾರರು ಹೆಚ್ಚಾಗಿದ್ದಾರೆ. ಶ್ರೀರಾಮಮಂದಿರ ಉದ್ಘಾಟನೆ ಬಳಿಕ ಜಿಲ್ಲೆಯೊಳಗೆ ಬಿಜೆಪಿ ವೋಟ್ ಬ್ಯಾಂಕ್ ವೃದ್ಧಿಸಿದೆ. ಹಾಗಾಗಿ ಕ್ಷೇತ್ರವನ್ನು ಉಳಿಸಿಕೊಂಡು ನಾವೇ ಗೆಲುವಿಗೆ ಶ್ರಮಿಸಬಹುದು ಎಂಬ ಅಭಿಪ್ರಾಯವನ್ನು ವರಿಷ್ಠರ ಮುಂದಿಡುತ್ತಿದ್ದಾರೆ.
ಬಿಜೆಪಿಯೊಳಗೆ ನಡಯುತ್ತಿರುವ ಬೆಳವಣಿಗೆಗಳನ್ನು ಜೆಡಿಎಸ್ ದೂರದಿಂದಲೇ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಬಿಜೆಪಿ ನಾಯಕರ ಯಾವುದೇ ಮಾತುಗಳಿಗೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಫಿಕ್ಸ್ ಎಂದೇ ಭಾವಿಸಿರುವ ಪಕ್ಷದ ನಾಯಕರು, ಕಾರ್ಯಕರ್ತರು ಚುನಾವಣಾ ಕಾರ್ಯಚಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ.
೨೦೧೫ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಖಾಡ ಪ್ರವೇಶಿಸಿ ಗೆಲುವು ಸಾಧಿಸಿದ್ದ ಸಿ.ಎಸ್. ಪುಟ್ಟರಾಜು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ಉತ್ಸುಕರಾಗಿದ್ದಾರೆ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರೂ ಗ್ರೀನ್‌ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣಾ ಸೋಲಿನಿಂದ ಎಚ್ಚೆತ್ತುಕೊಂಡಿರುವ ಪುಟ್ಟರಾಜು ಅವರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತ್ತು ಪಕ್ಷದ ನಾಯಕರು, ಮುಖಂಡರ ಬಗ್ಗೆ ಯಾವುದೇ ಮಾತನಾಡದೆ ಮೌನವಾಗಿದ್ದಾರೆ. ಪ್ರಚೋದನಕಾರಿ ಮಾತುಗಳಿಗೂ ಉತ್ತರ ನೀಡದೆ ಎರಡೂ ಪಕ್ಷದ ಮುಖಂಡರು- ಕಾರ್ಯಕರ್ತರನ್ನು ಒಗ್ಗಟ್ಟಾಗಿ ಕರೆದೊಯ್ಯುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.ಸ್ಟಾರ್ ಚಂದ್ರಶೇಖರ್ ಕಾಂಗ್ರೆಸ್ ಅಭ್ಯರ್ಥಿ?
ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿ- ಜೆಡಿಎಸ್‌ನಿಂದ ಅಭ್ಯರ್ಥಿ ಯಾರಾಗಬಹುದೆಂದು ಕಾದು ನೋಡುತ್ತಿದೆ. ಮಂಡ್ಯ ಕ್ಷೇತ್ರಕ್ಕೆ ಸಿನಿಮಾದವರು ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ನಾಗಮಂಗಲದ ಗುತ್ತಿಗೆದಾರ ಸ್ಟಾರ್ ಚಂದ್ರಶೇಖರ್ ಎಂಬುವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಮೂಲತಃ ನಾಗಮಂಗಲ ತಾಲೂಕಿನ ಕನ್ನಘಟ್ಟ ಗ್ರಾಮದವರಾದ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರ ಸಹೋದರ ಸ್ಟಾರ್ ಚಂದ್ರಶೇಖರ್ ಎಂದು ತಿಳಿದುಬಂದಿದೆ.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗಿಳಿಯಬಹುದೆಂಬ ವದಂತಿಗಳಿರುವುದರಿಂದ ಅಭ್ಯರ್ಥಿ ಹೆಸರನ್ನು ಬಹಿರಂಗಗೊಳಿಸುತ್ತಿಲ್ಲ. ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದ್ದು, ಹೆಸರು ಘೋಷಣೆಯಷ್ಟೇ ಬಾಕಿ ಇದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಕ್ಷೇತ್ರ ಪ್ರವೇಶಿಸಿದರಷ್ಟೇ ಬಹುಶಃ ಅಭ್ಯರ್ಥಿ ಬದಲಾವಣೆಯಾಗಬಹುದು. ಇಲ್ಲದಿದ್ದರೆ ಅವರೇ ಅಧಿಕೃತ ಅಭ್ಯರ್ಥಿಯಾಗಬಹುದೆಂದು ಹೇಳಲಾಗುತ್ತಿದೆ.