ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಕಾಂಗ್ರೆಸ್‌ನಿಂದ ಯಾರನ್ನೂ ಅಮಾನತು ಮಾಡಿಲ್ಲ. ಅವರವರ ಸ್ಥಾನದಲ್ಲಿ ಯಥಾಸ್ಥಿತಿ ಮುಂದುವರೆಯಲಿದ್ದಾರೆ, ಆದರೆ ಇಂತಹ ಅಹಿತಕರ ಘಟನೆಗಳು ಮುಂದೆ ಆಗಬಾರದು, ಯಾವುದೇ ವ್ಯಕ್ತಿಗಿಂತ ಪಕ್ಷವು ದೊಡ್ಡದು. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು, ಯಾವುದೇ ಪ್ರತಿಷ್ಠೆಗಳನ್ನು ತೋರಬಾರದು ಪಕ್ಷವನ್ನು ಸಂಘಟಿಸಲು ಎಲ್ಲರೂ ಮುಂದಾಗಬೇಕೆಂದು ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಮನವಿ ಮಾಡಿದರು. ತಾಲೂಕಿನ ಕುಂಬಾರಹಳ್ಳಿಯಲ್ಲಿ ಎಸ್.ಆರ್.ಎಸ್ ಪ್ಯಾಲೇಸ್ ಮತ್ತು ಶ್ರೀವಾರಿ ಕಲ್ಯಾಣ ಮಂಟಪ ಪ್ರಾರಂಭೋತ್ಸವಕ್ಕೆ ಆಗಮಿಸಿದ ಅವರು, ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.ವಾದ ವಿವಾದ ಇಲ್ಲಿಗೇ ನಿಲ್ಲಿಸಿ
ಈ ಹಿಂದೆ ಚಿತ್ರದುರ್ಗದಲ್ಲಿ ಎಸ್.ಸಿ, ಎಸ್.ಟಿ. ಐಕ್ಯತಾ ಸಮಾವೇಶ ಮಾಡಿದಾಗ ಎಲ್ಲರೂ ಏಕ ಪಕ್ಷಿಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿದರು, ಬಿಜೆಪಿ ಸರ್ಕಾರ ಬಂದರೆ ಸಂವಿಧಾನ ಬದಲಾಯಿಸಬಹುದೆಂಬ ಅನುಮಾನದಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ೧೩೬ ಸ್ಥಾನಗಳು ಬರಲು ಐಕ್ಯತಾ ಸಮಾವೇಶದಲ್ಲಿ ನೀಡಿದ ಸಂದೇಶದಿಂದ ಸಾಧ್ಯವಾಯಿತು, ಇದರಿಂದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರ ರಚಿಸಿದ್ದೇವೆ ಎಂದು ಪ್ರತಿಪಾಧಿಸಿದ ಅವರು, ದಲಿತ ಸಿ.ಎಂ ವಿಷಯವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದರು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ, ನಾವೆಲ್ಲರೂ ಸಿದ್ದರಾಮಯ್ಯರ ಪರ ಒಗ್ಗಟ್ಟಾಗಿ ನಿಂತಿದ್ದೇವೆ, ಪಕ್ಷದ ಸಂಪೂರ್ಣ ಸಹಕಾರ ಇದೆ, ಬಿಜೆಪಿ ಪಕ್ಷದ ಹುನ್ನಾರಗಳನ್ನು ಕಾಂಗ್ರೆಸ್ ಪಕ್ಷವು ಎದುರಿಸಲು ಶಕ್ತಿ ತುಂಬುತ್ತೇವೆ ಎಂದು ಹೇಳಿದರು. ಕೈಗಾರಿಕಾ ಕ್ಷೇತ್ರದ ಭೀಷ್ಮ ಟಾಟಾ
ಟಾಟಾ ರತನ್ ಲಾಲ್ ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರನ್ನು ಕೈಗಾರಿಕಾ ಕ್ಷೇತ್ರದ ಭೀಷ್ಮ ಎಂದರೆ ತಪ್ಪಾಗಲಾರದು, ೮೬ ವರ್ಷಗಳ ಟಾಟಾರನ್ನು ಕಳೆದುಕೊಂಡಿರುವುದು ದೇಶಕ್ಕೆ ತುಂಬಲಾಗದ ನಷ್ಟ ಎಂದರು.ಜಾತಿ ಗಣಿತಿ ವರದಿ ಇನ್ನೂ ಚರ್ಚಿಸಿಲ್ಲಜಾತಿ ಗಣತಿ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಗಳಾಗಬೇಕಾಗಿದೆ, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಸಮಾನತೆ, ಸಾಮಾಜಿಕ ನ್ಯಾಯಸಿಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾವಿರಾರು ಜಾತಿ, ಉಪಜಾತಿಗಳನ್ನು ಹೊಂದಿದೆ, ಜನಗಣತಿಯ ಅಂಕಿಅಂಶಗಳ ಪ್ರಕಾರ ಮೀಸಲಾತಿ ಕೊಡಬೇಕಾಗಿರುವುದು ಸಮ ಸಮಾಜದ ಧರ್ಮವಾಗಿದೆ. ಜಾತಿ, ಜನಗಣತಿಗಳಿಲ್ಲದೆ ಯಾರಿಗೂ ಸಿಗಬೇಕಾದ ಸೌಲಭ್ಯಗಳು ಇನ್ಯಾರಿಗೂ ಸಿಗುವ ಮೂಲಕ ಅನ್ಯಾಯವಾಗಲಿದೆ ಇದಕ್ಕೆ ಅವಕಾಶ ನೀಡಬಾರದು ಎಂದಿದ್ದರೆ ಎಲ್ಲಾ ವರ್ಗದವರಿಗೂ ನ್ಯಾಯ ಸಿಗಬೇಕಾದರೆ ಜಾತಿ ಮತ್ತು ಜನಗಣತಿಯನ್ನ ಬೆಂಬಲಿಸುವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಮುರಳಿ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯ್ ಶಂಕರ್, ಓಬಿಸಿ ಮಂಜುನಾಥ್ ಇದ್ದರು.