ಕಾಂಗ್ರೆಸ್‌ ಸಭೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಯೋಚಿಸಲಿ : ಮಾಜಿ ಸಚಿವ ಸಿ. ಟಿ. ರವಿ

Published : Oct 11, 2024, 01:08 PM IST
ct ravi

ಸಾರಾಂಶ

ಕಾಂಗ್ರೆಸ್‌ ಸಚಿವರು, ಶಾಸಕರು, ಮುಖಂಡರು ಮೇಲಿಂದ ಮೇಲೆ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಪಾರ್ಟಿ, ಟೀ ಪಾರ್ಟಿ ಅಂತಾ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲೋಚನೆ ಮಾಡಬೇಕಾದ ವಿಷಯ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ದಾವಣಗೆರೆ : ಕಾಂಗ್ರೆಸ್‌ ಸಚಿವರು, ಶಾಸಕರು, ಮುಖಂಡರು ಮೇಲಿಂದ ಮೇಲೆ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಪಾರ್ಟಿ, ಟೀ ಪಾರ್ಟಿ ಅಂತಾ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲೋಚನೆ ಮಾಡಬೇಕಾದ ವಿಷಯ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ಬಗ್ಗಲ್ಲ, ಜಗ್ಗಲ್ಲ, ಹೆದರಲ್ಲ ಅಂದ್ರೆ ಇದು ಪ್ರಜಾಪ್ರಭುತ್ವ. ಇಲ್ಲಿ ಇಂತಹದ್ದೆಲ್ಲಾ ನಡೆಯುವುದಿಲ್ಲ. ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಪ್ರತಿಯೊಬ್ಬರೂ ತಲೆಬಾಗಬೇಕು. ಜನರಿಗೆ ಹೆದರಲೇಬೇಕು. ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿಸಬೇಕು. ಕೆಳಗಿಳಿಸಬೇಕೆಂಬ ಆತುರ, ಅವಸರ ಬಿಜೆಪಿ ಇತರೆ ಪಕ್ಷಗಳಿಗೆ ಅಲ್ಲ. ಆದರೆ, ಕಾಂಗ್ರೆಸ್ಸಿನವರಿಗೆ ಅದರ ಆತುರ, ಅವಸರ ತೀವ್ರವಾಗಿ ಇದ್ದಂತಿದೆ ಎಂದು ಕುಟುಕಿದರು.

ಒಂದುವೇಳೆ ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ಸಿನವರಿಗೆ ವಿಶ್ವಾಸವಿದ್ದಿದ್ದರೆ ಇಂತಹ ಸಭೆಗಳು, ಪಾರ್ಟಿಗಳೇ ನಡೆಯುತ್ತಿರಲಿಲ್ಲ. ಆದರೆ, ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ಮೇಲೆ ವಿಶ್ವಾಸವಿಲ್ಲ. ಹಾಗಾಗಿಯೇ ಮೀಟಿಂಗ್‌ಗಳು ನಡೆಯುತ್ತಿವೆ. ಮುಡಾ ನಿವೇಶನ ಭ್ರಷ್ಟಾಚಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ, ಅರ್ಕಾವತಿ ಹಗರಣ ಹೀಗೆ ಭ್ರಷ್ಟಾಚಾರಗಳ ವಿರುದ್ಧ ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್ಸಿನವರ ಡಿನ್ನರ್ ಪಾರ್ಟಿ, ಟೀ ಪಾರ್ಟಿಗಳನ್ನು ನೋಡಿದಾಗ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿದ್ದರಾಮಯ್ಯ ಪದಚ್ಯುತಿಯಾಗುವ ವಿಚಾರ ಗೊತ್ತಾಗಿರಬಹುದು. ಈಗ ವಿಷಯಾಂತರ ಮಾಡಲು ಸಿದ್ದರಾಮಯ್ಯ ಜಾತಿ ಗಣತಿ ವಿಚಾರ ಮುನ್ನಲೆಗೆ ತಂದಿದ್ದಾರೆ ಎಂದು ಅವರು ಟೀಕಿಸಿದರು.

ಮೀಸಲಾತಿ ವಿರೋಧಿಸಲು ನೆಹರು ಪತ್ರ!:

ಜವಾಹರ ಲಾಲ್‌ ನೆಹರು ಪ್ರಧಾನಿ ಆಗಿದ್ದಾಗ ಮೀಸಲಾತಿ ವಿರೋಧಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖುದ್ದಾಗಿ ಪತ್ರ ಬರೆದಿದ್ದರು. ಈಗ ಅದೇ ಕಾಂಗ್ರೆಸ್ ಪಕ್ಷದವರು ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಜಾತಿಗಣತಿಯು ಈಗ ನೆನಪಾಗುತ್ತಿದೆಯೇ? ಕಾಂತರಾಜು ಆಯೋಗ 2010ರಲ್ಲೇ ವರದಿ ಸಲ್ಲಿಸಿತ್ತು. ಆದರೆ, ಈಗ ಕುರ್ಚಿ ವಿಚಾರಕ್ಕೆ ಬರುತ್ತಿದ್ದಂತೆ ಜಾತಿ ಗಣತಿ ನೆನಪಾಯಿತೇ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

* ಮಂಡಲ ಆಯೋಗ ಕುಂಡಿ ಅಡಿ ಹಾಕಿಕೊಂಡಿದ್ರು

ಕಾಂಗ್ರೆಸ್ಸಿಗೆ ಮೀಸಲಾತಿ ಬಗ್ಗೆ ಬದ್ಧತೆ ಇಲ್ಲ. ಮೀಸಲಾತಿ ವಿರೋಧಿಗಳೆಂದರೆ ಅದು ಕಾಂಗ್ರೆಸ್‌ನವರು. ಈ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯಲು ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್‌ನವರು ಎಂಬುದನ್ನು ಜನ ಮರೆತಿಲ್ಲ. ಸಾಮಾಜಿಕ ನ್ಯಾಯ ಕೊಡಿಸಲು ಬಿಜೆಪಿ ಯಾವಾಗಲೂ ಬದ್ಧವಿರುವ ಪಕ್ಷ. ಮಂಡಲ ಆಯೋಗವನ್ನೇ ಕುಂಡಿ ಅಡಿ ಹಾಕಿಕೊಂಡಿದ್ದವರು ಇದೇ ಕಾಂಗ್ರೆಸ್ಸಿನವರು. ಜಾತಿಗಣತಿಗೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಆದರೆ, ಅದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಸಾಮಾಜಿಕ ನ್ಯಾಯ ಕೊಡಿಸಲು ಜಾತಿ ಗಣತಿ ಬಳಕೆ ಮಾಡಿಕೊಂಡರೆ ನಮ್ಮ ಬೆಂಬಲವಿದೆ. ಆದರೆ, ನಿಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಅದನ್ನು ದುರ್ಬಳಕೆ ಮಾಡಿಕೊಂಡರೆ ಮಾತ್ರ ನಾವು ಸಹಿಸಲ್ಲ ಎಂದು ಸಿ.ಟಿ.ರವಿ ಹೇಳಿದರು.

* ವಿನಯ್ ಕುಲಕರ್ಣಿಗೂ ಬಂಧಿಸಬೇಕಲ್ವಾ?: ಸಿ.ಟಿ.ರವಿ

- ಮುನಿರತ್ನ ವಿರುದ್ಧ ಕೇಸ್ ಆಗಿ 8 ಗಂಟೆಯಲ್ಲೇ ಬಂಧಿಸಿದ ಆತುರ ಈಗ ಯಾಕಿಲ್ಲ?!

  ದಾವಣಗೆರೆ : ವಿನಯ ಕುಲಕರ್ಣಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಮುನಿರತ್ನ ವಿರುದ್ಧ ಕೇಸ್ ಆಗಿ ಕೇವಲ 8 ಗಂಟೆಯಲ್ಲೇ ಬಂಧಿಸಿದ್ದರು. ಈಗ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ವಿಷಯದಲ್ಲಿ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್ ಸರ್ಕಾರವು ಮುನಿರತ್ನಗೆ ಕೇಸ್ ದಾಖಲಾದ 8 ಗಂಟೆಯಲ್ಲೇ ಬಂಧಿಸಿದ್ದಂತೆ ವಿನಯ್ ಕುಲಕರ್ಣಿ ವಿಚಾರದಲ್ಲೂ ಕ್ರಮ ಕೈಗೊಳ್ಳಲಿ. ಪ್ರೇತಾತ್ಮವನ್ನೇ ಆತ್ಮಸಾಕ್ಷಿ ಅಂತಾ ತಿಳಿದವರಿದ್ದರೆ ಏನು ಮಾಡಬೇಕು? ಕಾಂಗ್ರೆಸ್ ಸರ್ಕಾರ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದರೆ, ಮುನಿರತ್ನ ಬಂಧಿಸಿದಂತೆ ವಿನಯ್ ಕುಲಕರ್ಣಿಗೂ ಬಂಧಿಸಲಿ ಎಂದರು.

ಯಾವ್ಯಾವ ಹಗರಣದಲ್ಲಿ ಯಾರು ಯಾರು ಇದ್ದಾರೋ ತನಿಖೆ ಮಾಡಿ, ಬಂಧಿಸಲಿ. ಆದರೆ, ಆತ್ಮಸಾಕ್ಷಿ ಅಂತಾ ಹೇಳಿ, ಸುಳ್ಳನ್ನೇ ಆತ್ಮಸಾಕ್ಷಿ ಮಾಡಿಕೊಂಡಿರುವ ಸಿದ್ದರಾಮಯ್ಯ ದಿನನಿತ್ಯ ಸುಳ್ಳು ಹೇಳುವುದನ್ನೇ ಆತ್ಮಸಾಕ್ಷಿ ಅಂತಾ ಅಂದುಕೊಂಡಿದ್ದಾರೆ. ಸುಳ್ಳನ್ನೇ ಆತ್ಮಸಾಕ್ಷಿ ಮಾಡಿಕೊಂಡಿದ್ದರೆ ಅಲ್ಲಿ ದೇವರು ಇರುವುದಿಲ್ಲ. ದೆವ್ವ ಇರುತ್ತದೆ ಎಂದರು.

ಸದ್ಯಕ್ಕೆ ಮುನಿರತ್ನರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ತನಿಖೆ ಮೇಲೆ ಸರ್ಕಾರ ಪರಿಣಾಮ ಬೀರಬಾರದು. ಮುನಿರತ್ನ ಬಂಧನಕ್ಕೆ ತೋರಿದ ಆತುರತೆ, ಕೇಸ್ ದಾಖಲಿಸಲು ಮಾಡಿದ ಅವಸರವನ್ನು ವಿನಯ ಕುಲಕರ್ಣಿ ವಿಚಾರದಲ್ಲೂ ಸಿದ್ದರಾಮಯ್ಯ ಸರ್ಕಾರ ಪ್ರದರ್ಶಿಸಬೇಕಲ್ಲವೇ? ಬಂಧಿಸುತ್ತಾರೋ, ಇಲ್ಲವೋ ಅದನ್ನು ನಾವು ನೋಡುತ್ತೇವೆ, ಜನರೂ ಗಮನಿಸುತ್ತಾರೆ ಎಂದು ಸಿ.ಟಿ.ರವಿ ಹೇಳಿದರು.

* ಕಾಂಗ್ರೆಸ್ ಸರ್ಕಾರದ ಖಾಜಿ ನ್ಯಾಯ: ಸಿ.ಟಿ.ರವಿ

- ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಹಿಂದು ಕಾರ್ಯಕರ್ತರಿಗೆ ಆತ್ಮಸ್ಥೈರ್ಯ

ದಾವಣಗೆರೆ: ಗಣೇಶ ಮೆರವಣಿಗೆಗೆ ಅಡ್ಡಿಪಡಿಸಿದವರು, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಪುಂಡರನ್ನು ಬಂಧಿಸಿ, ಕೇಸ್ ಹಾಕುವ ಬದಲಿಗೆ ಮೆರವಣಿಗೆಯಲ್ಲಿದ್ದವರು, ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದವರನ್ನೇ ಎ-1 ಮಾಡಿ, ಹಿಂದುಗಳನ್ನು ಬಂಧಿಸಿ, ಮುಸ್ಲಿಮರನ್ನೂ ಬಂಧಿಸುವ ಖಾಜಿ ನ್ಯಾಯವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾರಾಗೃಹಕ್ಕೆ ಬುಧವಾರ ಭೇಟಿ ನೀಡಿ ಜೈಲಿನಲ್ಲಿದ್ದ ಸತೀಶ ಪೂಜಾರಿ, ದರ್ಶನ್ ಕೆ.ಪವಾರ್, ಮಧು ಸೇರಿದಂತೆ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ಮೂಡಿಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಗಮಂಗಲದಲ್ಲಿ ಸಾರ್ವಜನಿಕ ರಸ್ತೆ, ಅದೂ ರಾಜ್ಯ ಹೆದ್ದಾರಿಯಲ್ಲಿ ಗಣೇಶ ಮೆರವಣಿಗೆ ನಡೆಸದಂತೆ, ಕಲ್ಲು ತೂರಾಟ ಮಾಡಲಾಗಿದೆ. ಗಣಪತಿ, ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದವರ ಮೇಲೆ ಕೇಸ್ ಹಾಕಬೇಕಾಗಿತ್ತು. ದಾವಣಗೆರೆಯಲ್ಲೂ ಕಲ್ಲು ತೂರಿದವರನ್ನು ಬಿಟ್ಟು, ಗಣೇಶ ಪ್ರತಿಷ್ಠಾಪಿಸಿದ್ದವರು, ಗಣೇಶ ಮೆರವಣಿಗೆಯಲ್ಲಿ ಇದ್ದವರನ್ನು ಬಂಧಿಸಲಾಗಿದೆ. ಮತ್ತೊಂದು ಕಡೆ ಮುಸ್ಲಿಮರನ್ನೂ ಬಂಧಿಸಿದರು. ಕಾಂಗ್ರೆಸ್ ಸರ್ಕಾರ ಖಾಜಿ ನ್ಯಾಯವನ್ನು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವು ಮತಾಂಧರನ್ನು ಓಟು ಬ್ಯಾಂಕ್ ಆಗಿ ಆರಾಧಿಸುತ್ತಿದೆ. ಮಹಮ್ಮದ್ ಅಲಿ ಜಿನ್ನಾ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಸಿದ್ದರಾಮಯ್ಯ 2ನೇ ಅವಧಿಗೆ ಸಿಎಂ ಆದನಂತರ ಕೋಮುವಾದಿ ಶಕ್ತಿಗಳು, ಮತಾಂಧರಿಗೆ ಹೆಚ್ಚು ಶಕ್ತಿ ಬಂದಿದೆ ಎಂದರು.

ಮತಾಂಧರನ್ನು ಓಟು ಬ್ಯಾಂಕ್ ಅಂತಾ ಕಾಂಗ್ರೆಸ್ ಪರಿಗಣಿಸಿ, ರಾಜಕಾರಣ ಮಾಡುತ್ತಿದೆ. ಇದರಿಂದ ದೊಡ್ಡ ಅಪಾಯ ತಂದೊಡ್ಡುತ್ತಿದೆ. ಕೋಮುಶಕ್ತಿಗಳು ಸದ್ಯ ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಜನರು ಕೆಲ ಕಾಲ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅಪರಾಧ ಎಸಗಿ, ಕೊಲೆ ಮಾಡಿ, ಅತ್ಯಾಚಾರ ಎಸಗಿ ಯಾವುದೇ ಹಿಂದುಗಳು ಜೈಲಿಗೆ ಹೋಗಿಲ್ಲ. ಸದುದ್ದೇಶ ಇಟ್ಟುಕೊಂಡು ಬಂದ ಯುವಕರನ್ನು ಆರೋಪಿ ಮಾಡಿ, ಬಂಧಿಸಲಾಗಿದೆ. ನೀವು ಯಾರೂ ಹೆದರಬೇಡಿ ಅಂತಾ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ಮೂಡಿಸುತ್ತಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದರು.

ನ್ಯಾಯಾಲಯದಲ್ಲಿ ನಮ್ಮ ಪರ ವಕೀಲರ ತಂಡ ವಕಾಲತ್ತು ಸಲ್ಲಿಸಿದೆ. ಅ.14ಕ್ಕೆ ಸಿಗುವ ವಿಶ್ವಾಸವಿದೆ. ಬಂಧಿತರಲ್ಲಿ ವಿದ್ಯಾರ್ಥಿಗಳೂ ಇದ್ದಾರೆ. ಅಂತಹ ಮಕ್ಕಳ ಬಗ್ಗೆ ಸಂಬಂಧಿಸಿದವರ ಜೊತೆ ಮಾತನಾಡುತ್ತೇವೆ. ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್‌, ಹಿರಿಯ ಮುಖಂಡರಾದ ಎಂ.ಪಿ. ಕೃಷ್ಣಮೂರ್ತಿ ಪವಾರ್‌, ಧನಂಜಯ ಕಡ್ಲೇಬಾಳು, ಅನಿಲ ಕುಮಾರ ನಾಯ್ಕ, ಅಣ್ಣೇಶ, ಶಿವನಗೌಡ ಪಾಟೀಲ್‌, ಟಿಂಕರ್ ಮಂಜಣ್ಣ, ರಘು ಅಂಬರಕರ್‌, ಶಂಕರ ಗೌಡ ಬಿರಾದಾರ್‌, ಕಿಶೋರ, ವಕೀಲರಾದ ಎ.ಸಿ. ರಾಘವೇಂದ್ರ ಮೊಹರೆ, ದಿವಾಕರ ಇತರರು ಇದ್ದರು.

ಕಾಂಗ್ರೆಸ್ಸಿನವರಿಗೆ ಒಂದು ಮನೋರೋಗ ಇದೆ. ಕಾಂಗ್ರೆಸ್ ಗೆದ್ದರೆ ಅದು ಜನಾದೇಶವೆನ್ನುತ್ತಾರೆ. ಬಿಜೆಪಿ ಗೆದ್ದರೆ ಅದು ಇವಿಎಂ ತೊಂದರೆ ಎನ್ನುತ್ತಾರೆ. ಈಗ ಹರಿಯಾಣದಲ್ಲಿ ಬಿಜೆಪಿ ಗೆದ್ದಿರುವ ಬಗ್ಗೆ ಇದೇ ಹೇಳುತ್ತಿದ್ದಾರೆ. ಹಾಗಾದರೆ ಜಮ್ಮು-ಕಾಶ್ಮೀರದಲ್ಲಿ ಗೆದ್ದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿದ್ದು ಇವಿಎಂ ತೊಂದರೆಯಿಂದನಾ? ಕಾಂಗ್ರೆಸ್ಸಿನವರಿಗೆ ಸೋತಾಗಲೆಲ್ಲಾ ಇದೊಂದು ರೋಗ ಇದ್ದೇ ಇರುತ್ತದೆ. ಆದ್ದರಿಂದ ಕಾಂಗ್ರೆಸ್ಸನ್ನು ಸೋಲಿಸಿ, ರೋಗ ಹಾಗೆಯೇ ಇರುವಂತೆ ಮಾಡಬೇಕು

- ಸಿ.ಟಿ.ರವಿ, ಬಿಜೆಪಿ ಮಾಜಿ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಆಧುನಿಕ ಭಾರತದ ಶಿಲ್ಪಿ, ಯುಗಪುರುಷ - ಅಟಲ್ ಬಿಹಾರಿ ವಾಜಪೇಯಿ
ಆದರ್ಶ ರಾಜಕಾರಣದ ಭಾರತ ರತ್ನ-ಭಾರತದ ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ಅಜಾತಶತ್ರು