ನಂದೂರ್‌ಬಾರ್ (ಮಹಾರಾಷ್ಟ್ರ): ಇತ್ತೀಚೆಗಷ್ಟೇ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ‘ಔರಂಗಜೇಬ್‌ನಂತೆ ಮೋದಿಯವರನ್ನು ಮಹಾರಾಷ್ಟ್ರದಲ್ಲಿ ಜೀವಂತ ಸಮಾಧಿ ಮಾಡಲಾಗುತ್ತದೆ’ ಎಂದು ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.‘ಕೆಲವು ವಿಪಕ್ಷ ನಾಯಕರು ನನ್ನನ್ನು ಜೀವಂತ ಸಮಾಧಿಯನ್ನಾಗಿ ನೋಡಬೇಕೆಂದು ಬಯಸುತ್ತಿದ್ದಾರೆ. ಆದರೆ , ದೇಶದ ಜನತೆಯೇ ನನಗೆ ಭದ್ರತಾ ಕವಚ. ಅವರು ನನಗೆ ಯಾವುದೇ ಹಾನಿಯಾಗಲು ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ.
ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ‘ಮೋದಿ ನಿಮ್ಮ ಸಮಾಧಿ ತೋಡಲಾಗುತ್ತದೆ’ ಎಂದು ಈ ಹಿಂದೆ ಕಾಂಗ್ರೆಸ್ ನಾಯಕನೊಬ್ಬ ನೀಡಿದ ಹೇಳಿಕೆಯ ವಿರುದ್ಧವೂ ಹರಿಹಾಯ್ದರು. ‘ತಮ್ಮ ಮತದಾರರನ್ನು (ಒಂದು ಕೋಮನ್ನು) ಮನಸ್ಸಿನಲ್ಲಿಟ್ಟುಕೊಂಡು ಅವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಇವೆಲ್ಲವನ್ನೂ ನೋಡಿ ನಿಜವಾಗಿಯೂ ದುಃಖಿತರಾಗಿರಬೇಕು’ ಎಂದು ಚಾಟಿ ಬೀಸಿದರು.ಇದೇ ವೇಳೆ, ಉದ್ಧವ್ ಠಾಕ್ರೆ ಬಣದ ಶಿವಸೇನೆಯನ್ನು ‘ನಕಲಿ ಶಿವಸೇನೆ’ ಎಂದು ಜರಿದ ಮೋದಿ, ‘ನಕಲಿ ಶಿವಸೇನೆ ನನ್ನನ್ನು ಈ ರೀತಿ ನೋಡಲು ಬಯಸುತ್ತಿದೆ. ಅವರು ತಮ್ಮ ನೆಚ್ಚಿನ ಮತ ಬ್ಯಾಂಕ್‌ಗೆ ಇಷ್ಟವಾಗುವ ರೀತಿಯಲ್ಲಿ ನನ್ನನ್ನು ನಿಂದಿಸುತ್ತಾರೆ. ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಾಂಬ್ ಸ್ಫೋಟದ ಆರೋಪಿಗಳನ್ನು ಪಕ್ಷಕ್ಕೆ ತೆಗೆದುಕೊಳ್ಳುತ್ತಾರೆ. ಇದರಿಂದ ಜನರು ಅವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ’ ಎಂದು ತೀಕ್ಷ್ಣ ವಾಗ್ದಾಳಿಯನ್ನು ನಡೆಸಿದರು.