;Resize=(412,232))
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯ ಮೊದಲ ಹಂತ ಸೋಮವಾರ ಸಂಜೆಗೆ ಅಂತ್ಯವಾಗಿದ್ದು, ಹಾಲಿ ಮತದಾರರ ಪಟ್ಟಿಯಿಂದ ಬರೋಬ್ಬರಿ 1.08 ಕೋಟಿ (ಶೇ.19.54) ಮತದಾರರ ಹೆಸರು ರದ್ದಾಗಲಿದೆ.
ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತದಾರರ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಮತ್ತು ಎಎಸ್‌ಡಿಡಿಒ ವರ್ಗದ ಅರ್ಹ ಮತದಾರರ ಗಣತಿ ನಮೂನೆ ವಾಪಸ್ ಪಡೆದು (ರೋಲ್‌ಬ್ಯಾಕ್) ಮಾಹಿತಿ ಭರ್ತಿ ಮರಳಿಸಲು ನೀಡಲಾಗಿದ್ದ ಸಮಯಾವಕಾಶ ಮುಕ್ತಾಯವಾಗಿದೆ.
ರಾಜ್ಯದ ಹಾಲಿ ಮತದಾರರ ಪಟ್ಟಿಯಲ್ಲಿ 5.54 ಕೋಟಿ ಮತದಾರರು ಇದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜೂ.30ರಿಂದ ಆ.17ರ ಅವಧಿಯಲ್ಲಿ ಬಿಎಲ್‌ಒಗಳು ಗಣತಿ ನಮೂನೆಗಳನ್ನು ವಿತರಿಸಲು ಮತದಾರರ ಮನೆಗಳಿಗೆ ಭೇಟಿ ನೀಡಿದ ವೇಳೆ ಪತ್ತೆಯಾಗದವರು/ಗೈರು, ಶಾಶ್ವತ ಸ್ಥಳಾಂತರ, ಮೃತರು, ಈಗಾಗಲೇ ಬೇರೆ ಕಡೆ ನೋಂದಣಿಯಾದವರು ಮತ್ತು ಇತರೆ(ಎಎಸ್‌ಡಿಡಿಒ) ಎಂದು 1.08 ಕೋಟಿ ಮತದಾರರನ್ನು ಗುರುತು ಮಾಡಿದ್ದಾರೆ.
ಅಂದರೆ, ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ ಮತ್ತು ಆ.24ರಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸುವ ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. 5.54 ಕೋಟಿ ಮತದಾರರ ಪೈಕಿ ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿ ಮತದಾರರು ಹೆಸರು ಪ್ರಕಟವಾಗಲಿದೆ.
ಕೇಂದ್ರ ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆ.24ರಿಂದ ಸೆ.23 ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶವಿದೆ. ಆ.24ರಿಂದ ಅ.22ರ ವರೆಗೆ ನೋಟಿಸ್/ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ವೇಳೆ ಮತದಾರರು ಈಗಾಗಲೇ ಗಣತಿ ನಮೂನೆಗಳಲ್ಲಿ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತಹ ಮತದಾರರಿಗೆ ಮತದಾರರ ನೋಂದಣಾಧಿಕಾರಿ(ಇಆರ್‌ಒ) ನೋಟಿಸ್ ಜಾರಿಗೊಳಿಸಲಿದ್ದಾರೆ. ಆಗ ಮತದಾರರು ನಿಗದಿತ ದಾಖಲೆಗಳನ್ನು ಇಆರ್‌ಒಗೆ ಸಲ್ಲಿಕೆ ಮಾಡಬೇಕು. ಬಳಿಕ ಅವುಗಳನ್ನು ಪರಿಶೀಲಿಸಿ ಆ ಮತದಾರರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ. ಒಂದು ವೇಳೆ ನಿಗದಿತ ದಾಖಲೆ ನೀಡುವಲ್ಲಿ ವಿಫಲವಾದಲ್ಲಿ ಅಂಥ ಮತದಾರರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತದೆ.
ಎಎಸ್‌ಡಿಡಿಒ ವರ್ಗದ 1.08 ಕೋಟಿ ಮತದಾರರು:
ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರು ಇದ್ದಾರೆ. ಈ ಪೈಕಿ ಎಸ್‌ಐಆರ್ ವೇಳೆ ಎ-ಆಬ್ಸೆಂಟ್ 15,28,985, ಎಸ್-ಪರ್ಮನೆಂಟ್ ಶಿಫ್ಟ್ 65,61,607, ಡಿ-ಡೆತ್ 16,38,839, ಡಿ-ಡ್ಯುಪ್ಲಿಕೇಟ್ 7,07,792, ಒ-ಅದರ್ಸ್ 3,94,722 ಸೇರಿ ಒಟ್ಟು 1,08,31945 (ಶೇ.19.54) ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಅಂದರೆ, ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ. ಉಳಿದಂತೆ 4,46,00,369 (ಶೇ.80.46) ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಖಚಿತವಾಗಿ ಪ್ರಕಟವಾಗಲಿದೆ.
ಫಾರ್ಮ್ 6 ಸಲ್ಲಿಸಿ ಸೇರ್ಪಡೆ
ಈ ಎಎಸ್‌ಡಿಡಿಒ ವರ್ಗದ 1.08 ಕೋಟಿ ಮತದಾರರ ಪೈಕಿ 65.61 ಲಕ್ಷ ಮತದಾರರನ್ನು ಶಾಶ್ವತ ಸ್ಥಳಾಂತರ ಎಂದು ಗುರುತಿಸಲಾಗಿದೆ. ಹೀಗಾಗಿ ಈ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್ 6 ಭರ್ತಿ ಮಾಡಿ ಸಲ್ಲಿಸಿದರೆ, ಸಂಬಂಧಪಟ್ಟ ಇಆರ್‌ಒ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿದ್ದಾರೆ. ಈವರೆಗೂ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳದ ಮತದಾರರು ಫಾರ್ಮ್ 6 ಭರ್ತಿ ಮಾಡಲು ಅವಕಾಶವಿದೆ.
ಅತಿಹೆಚ್ಚು ಮತದಾರರ ಹೆಸರು ರದ್ದಾಗುವ ಜಿಲ್ಲೆಗಳು
ಬೆಂಗಳೂರು ನಗರ 17,26,634 ಶೇ.42.94
ಬೆಂಗಳೂರು ಗ್ರಾಮಾಂತರ 1,16,934 ಶೇ.12.81
ಬಿಬಿಎಂಪಿ ಉತ್ತರ 10,58,104 ಶೇ.45.36
ಬಿಬಿಎಂಪಿ ಕೇಂದ್ರ 8,66,406 ಶೇ.45.84
ಬಿಬಿಎಂಪಿ ದಕ್ಷಿಣ 10,64,044 ಶೇ.49.61
ಕಲಬುರಗಿ 5,23,784 ಶೇ.22.09
ಮೈಸೂರು 5,59,697 ಶೇ.19.99
ರಾಯಚೂರು 3,21,558 ಶೇ.18.75
ಬಳ್ಳಾರಿ 2,23,566 ಶೇ.18.18