;Resize=(412,232))
ರಾಂಚಿ: ನೀಟ್ ಪರೀಕ್ಷಾ ಅಕ್ರಮ ಪ್ರತಿಭಟಿಸಿ ದಿಲ್ಲಿಯಲ್ಲಿ ನಡೆದ ಜೆನ್‌ಝೀ ಹೋರಾಟಕ್ಕೆ ಜಯ ಸಿಕ್ಕ ಬೆನ್ನಲ್ಲೇ, ಜಾರ್ಖಂಡ್‌ನಲ್ಲಿ ನೇಮಕ ಪರೀಕ್ಷೆಗಳಲ್ಲಿನ ಅಕ್ರಮ ಖಂಡಿಸಿ ಹೋರಾಟ ನಡೆಸುತ್ತಿದ್ದ ಜೆನ್‌ಝೀಗಳಿಗೂ ದೊಡ್ಡ ಗೆಲುವು ಸಿಕ್ಕಿದೆ. ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕಳೆದ 24 ದಿನಗಳಿಂದ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರ ಸಮ್ಮತಿ ವ್ಯಕ್ತಪಡಿಸಿದೆ.
ವಿದ್ಯಾರ್ಥಿಗಳ ಬೇಡಿಕೆ ಕುರಿತು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸೊರೇನ್ ಬಳಿಕ ಸುದ್ದಿಗಾರರಿಗೆ ಸಂಪುಟ ಸಭೆಯ ಮಾಹಿತಿ ನೀಡಿದರು. ಇದರ ಬೆನ್ನಲ್ಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ಆದರೆ ಹಗರಣ ಕುರಿತು ಸಿಬಿಐ ತನಿಖೆಗೆ ಆದೇಶಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.
ಜಾರ್ಖಂಡ್ ಲೋಕಸೇವಾ ಆಯೋಗ, ಸ್ಟಾಫ್ ಸೆಲೆಕ್ಷನ್ ಕಮಿಟಿ ಹಾಗೂ ಲಖನೌ ಮೂಲದ ಟಿಡಿಪಿಎಲ್ ನಡೆಸಿದ ಎಲ್ಲಾ ಪರೀಕ್ಷೆ ಮತ್ತು ನೇಮಕವನ್ನು ರದ್ದು ಮಾಡಲಾಗುವುದು. ಸದ್ಯ ನಡೆದಿರುವ ತನಿಖೆಯಿಂದ, ಪರೀಕ್ಷೆಗಳಲ್ಲಾಗಿರುವ ಕೆಲ ದೋಷಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ, 2014ರಿಂದ ನಡೆದ ಪರೀಕ್ಷೆಗಳಲ್ಲಿ ಕಂಡುಬಂದ, ಸಣ್ಣ ಅಥವಾ ದೊಡ್ಡ, ಎಲ್ಲಾ ಲೋಪದೋಷಗಳ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ಇದಕ್ಕಾಗಿ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕೌಶಲ್ ಅವರ ನೇತೃತ್ವದಲ್ಲಿ ಪರೀಕ್ಷಾ ಸುಧಾರಣಾ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಸೊರೇನ್ ಘೋಷಿಸಿದ್ದಾರೆ.
ಇದರ ಬೆನ್ನಲ್ಲೇ ರಾಂಚಿ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಹರ್ಷಿಸಿದ್ದಾರೆ. ಆದರೆ, ತಮ್ಮ ಆಗ್ರಹದಂತೆ ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರ ಮುಂದಾಗದ ಕಾರಣ, ಆ ಬೇಡಿಕೆ ಈಡೇರುವ ವರೆಗೆ ಹೋರಾಟ ಮುಂದುವರಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪರೀಕ್ಷೆ ರದ್ದತಿ ಬೆನ್ನಲ್ಲೇ ಮಾತನಾಡಿದ ನಿರಶನ ನಿರತ ದೇವೇಂದ್ರ ಮಹ್ತೋ, ಶೀಘ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಉಪವಾಸ ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ. ಜತೆಗೆ, ‘ಉಪವಾಸವನ್ನು ಹೇಗೆ ಮುರಿಯಬೇಕು ಎಂಬ ಬಗ್ಗೆ ಶೀಘ್ರ ನಿರ್ಧರಿಸುತ್ತೇನೆ. ನಮ್ಮ ಹೋರಾಟ ನಿಲ್ಲುವುದಿಲ್ಲ. ಪರೀಕ್ಷೆಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ವ್ಯವಸ್ಥೆ ಸ್ಥಾಪನೆಯಾಗುವ ತನಕ ವಿದ್ಯಾರ್ಥಿಗಳಿಗಾಗಿ ಹೋರಾಡುತ್ತಲೇ ಇರುತ್ತೇನೆ’ ಎಂದಿದ್ದಾರೆ.