ಬಳಸದ 6757 ಎಕರೆ ‘ನೈಸ್‌’ ಜಮೀನು ಬಿಡದಿ

Published : Aug 18, 2026, 11:10 AM IST
Thawar Chand Gehlot

ಸಾರಾಂಶ

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಬಳಕೆಯಾಗದೆ ಉಳಿಸಿರುವ ಸುಮಾರು 6,757 ಎಕರೆ ಭೂಮಿಯನ್ನು ಹಿಂಪಡೆದು ಪ್ರಸ್ತಾಪಿತ ಬಿಡದಿ ಟೌನ್‌ಶಿಪ್‌ ಯೋಜನೆಗೆ ಬಳಸಬಹುದೇ ಎಂದು ಪರಿಶೀಲಿಸುವಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಬೆಂಗಳೂರು : ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ/ನೈಸ್‌) ಯೋಜನೆಗೆ ಬಳಕೆಯಾಗದೆ ಉಳಿಸಿರುವ ಸುಮಾರು 6,757 ಎಕರೆ ಭೂಮಿಯನ್ನು ಹಿಂಪಡೆದು ಪ್ರಸ್ತಾಪಿತ ಬಿಡದಿ ಟೌನ್‌ಶಿಪ್‌ ಯೋಜನೆಗೆ ಬಳಸಬಹುದೇ ಎಂದು ಪರಿಶೀಲಿಸುವಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಟಿ.ಜೆ.ಹಾಗೂ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಪಂಚಾಯತಿಗಳ ರೈತ ಕಲ್ಯಾಣ ಸಂಘಗಳು ತಮಗೆ ಆ.3ರಂದು ಬರೆದಿರುವ ಮನವಿ ಪತ್ರಗಳು ಹಾಗೂ ನೈಸ್‌ ಯೋಜನೆ ಕುರಿತು ಹೈಕೋರ್ಟ್‌ನ ಕೆಲ ಆದೇಶಗಳನ್ನು ಉಲ್ಲೇಖಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ರಾಜ್ಯಪಾಲರು ಇತ್ತೀಚೆಗೆ ಪತ್ರ ಬರೆದು ಈ ಸಲಹೆ ನೀಡಿದ್ದಾರೆ.

ಪತ್ರದಲ್ಲೇನಿದೆ?:

ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರೇ, ನನಗೆ ಬಂದಿರುವ ಮನವಿದಾರರ ಪತ್ರಗಳಲ್ಲಿ ತಿಳಿಸಿರುವ ಪ್ರಕಾರ, ನೈಸ್‌ ಯೋಜನೆಗೆ ಮಂಜೂರು ಮಾಡಲಾದ ಸರ್ಕಾರಿ ಜಮೀನಿನ ಪೈಕಿ 376 ಎಕರೆ ಮಾತ್ರ ಪೆರಿಫೆರಲ್‌ ರಸ್ತೆ, ಸಂಪರ್ಕ ರಸ್ತೆ ಮತ್ತು ಮೂಲಸೌಕರ್ಯಗಳಿಗೆ ಬಳಸಲಾಗಿದೆ. ಸುಮಾರು 6,757 ಎಕರೆ ಜಮೀನು ಬಳಕೆಯಾಗಿಲ್ಲ. ಈ ಭೂಮಿಯನ್ನು ಕಾನೂನು ಬದ್ಧ ಅಧಿಕಾರವಿಲ್ಲದೆ ಖಾಸಗಿ ವ್ಯಕ್ತಿ, ಸಂಸ್ಥೆಗಳು ವಶಪಡಿಸಿಕೊಂಡು, ಸ್ವಾಧಿನ ಪಡಿಸಿಕೊಂಡಿರಬಹುದು. ಸರ್ಕಾರದ ಪ್ರಸ್ತಾವಿತ ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್‌ (ಬಿಡದಿ ಟೌನ್‌ಶಿಪ್‌) ಯೋಜನೆಯಿಂದ ಈ ವಿಷಯ ಮಹತ್ವ ಪಡೆದುಕೊಳ್ಳುತ್ತದೆ. ಬಿಡದಿ ಟೌನ್‌ಶಿಪ್‌ ಯೋಜನೆಗೆ ಒಂಬತ್ತು ಹಳ್ಳಿಗಳ ವ್ಯಾಪ್ತಿಯಲ್ಲಿ ಸುಮಾರು 7,431 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಈ ಭೂಮಿಯಲ್ಲಿ ವಾಸಿಸುತ್ತಿರುವ ಜನರು ಗಣನೀಯ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಹೈನುಗಾರಿಕೆ ಮತ್ತು ಜಾನುವಾರು ಚಟುವಟಿಕೆಗಳನ್ನು ಅವಲಂಭಿಸಿದ್ದಾರೆ. ಅಲ್ಲದೆ, ಈ ವ್ಯಾಪ್ತಿಯಲ್ಲಿ 5,03,915 ಹಣ್ಣಿನ ಮರಗಳು, 8,412 ಜಾನುವಾರುಗಳಿದ್ದು ವಾರ್ಷಿಕ ಸುಮಾರು 49,42,047.6 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸುಮಾರು 840 ಎಕರೆ ಕೃಷಿ ಯೋಗ್ಯ ಭೂಮಿ, 501.04 ಎಕರೆ ಹಿಪ್ಪುನೇರಳೆ ಕೃಷಿ, 12,400 ಮರಗಳನ್ನು ಒಳಗೊಂಡಿರುವ ಸಾಮಾಜಿಕ ಅರಣ್ಯೀಕರಣದ ಭಾಗವಾಗಿದೆ ಎಂದು ತಿಳಿಸಲಾಗಿದೆ.

ಅಲ್ಲದೆ, ಕಳೆದ ವರ್ಷ ಜ.9 ಮತ್ತು ಜು.29ರ ಹೈಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಲಾಗಿದ್ದು, ಆದೇಶದಲ್ಲಿ ನೈಸ್‌ ಯೋಜನೆಯ ಬಳಕೆಯಾಗದ ಸರ್ಕಾರಿ ಭೂಮಿಯನ್ನು ಕಾನೂನುಬದ್ಧವಾಗಿ ವಶಪಡಿಸಿಕೊಳ್ಳಬೇಕೆಂದು ಮತ್ತು ಪ್ರಸ್ತಾವಿತ ಬಿಡದಿ ಟೌನ್‌ಶಿಪ್‌ ಉದ್ದೇಶಕ್ಕೆ ಇದು ಸೂಕ್ತವಾಗಿದೆ. ಇದರಿಂದ ಪ್ರಸ್ತಾಪಿತ ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್‌ (ಬಿಡದಿ) ಯೋಜನೆಗೆ ಖಾಸಗಿ ಕೃಷಿ ಭೂಮಿಯನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಕೃಷಿ ಮತ್ತು ತೋಟಗಾರಿಕಾ ಸಂಪನ್ಮೂಲಗಳ ರಕ್ಷಣೆಯಾಗುತ್ತದೆ. ರೈತ ಕುಟುಂಬಗಳಿಗೆ ಸ್ಥಳಾಂತರ ಸಂಕಷ್ಟವೂ ಕಡಿಮೆಯಾಗುತ್ತದೆ. ಸ್ವಾಧೀನಕ್ಕೆ ಸಂಬಂಧಿಸಿದ ಮೊಕದ್ದಮೆಗಳು ಮತ್ತು ಸಾರ್ವಜನಿಕ ವೆಚ್ಚದ ಹೊರೆಯೂ ಇಳಿಕೆಯಾಗುತ್ತದೆ ಎಂದು ಹೇಳಿದ್ದಾರೆ ಎಂದು ಅರ್ಜಿದಾರರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿದಾರರು ಎತ್ತಿರುವ ವಿಷಯವು ಗಂಭೀರ ಕಳವಳಕಾರಿಯಾಗಿದೆ ಮತ್ತು ಪರಿಗಣಿಸಬೇಕಾಗಿದೆ. ಆದ್ದರಿಂದ, ನಾನು ಈ ಅರ್ಜಿಗಳನ್ನು ಈ ಪತ್ರದೊಂದಿಗೆ ಕಳುಹಿಸುತ್ತಿದ್ದೇನೆ, ಈ ಅರ್ಜಿಗಳನ್ನು ಪರಿಶೀಲಿಸಿ ಮತ್ತು ಕಾನೂನಿನ ನಿಬಂಧನೆಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಿ ಮತ್ತು ತೆಗೆದುಕೊಂಡ ಕ್ರಮದ ವರದಿಯನ್ನು ಆದಷ್ಟು ಬೇಗ ಕಳುಹಿಸಬೇಕೆಂದು ಸರ್ಕಾರಕ್ಕೆ ರಾಜ್ಯಪಾಲರು ಸಲಹೆ ನೀಡಿದ್ದಾರೆ.

ರಾಜ್ಯಪಾಲರ ಸಲಹೆ ಏನು?

- ಬಿಡದಿ ಟೌನ್‌ಶಿಪ್‌ಗೆ 9 ಹಳ್ಳಿಗಳ ವ್ಯಾಪ್ತಿಯಲ್ಲಿ 7,431 ಎಕರೆ ಭೂಮಿ ಸ್ವಾಧೀನ ಉದ್ದೇಶ

- ಇಲ್ಲಿ ವಾಸಿಸುತ್ತಿರುವ ಜನರಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಹೈನುಗಾರಿಕೆ ವೃತ್ತಿ

- ಇಲ್ಲಿನ ಜಮೀನು ಕೃಷಿ ಜತೆ 12,400 ಮರಗಳನ್ನು ಒಳಗೊಂಡ ಅರಣ್ಯೀಕರಣದ ಭಾಗ

- ಹೀಗಾಗಿ ಈ ಜಮೀನಿನ ಬದಲು ನೈಸ್‌ ಯೋಜನೆಯ ಬಳಕೆಯಾಗದ ಜಮೀನು ಬಳಸಿ

- ಸಂಘಟನೆಗಳ ಈ ಸಲಹೆಯನ್ನು ಪರಿಗಣಿಸಿ. ಇದರಿಂದ ಕೃಷಿ ಭೂಮಿ ಉಳಿಯುತ್ತದೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಹನೂರಲ್ಲಿ ಹತರಾದ 3 ಜನ ಬೇಟೆಗೆಂದೇ ಹೋಗಿದ್ರು: ಸರ್ಕಾರ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಭವಿಷ್ಯದ ಬಗ್ಗೆ ತೀವ್ರ ಕುತೂಹಲ ಸೃಷ್ಟಿ