ಬೆಂಗಳೂರು : ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿದ್ದು, ಅದರ ಬೆನ್ನಲ್ಲೇ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನದ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿದೆ.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತಂಡದಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ ಲಭಿಸಿದ್ದು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿದ್ದ ಬಿ.ಎಲ್.ಸಂತೋಷ್ ಅವರ ಸ್ಥಾನ ಅಬಾಧಿತವಾಗಿದೆ. ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಲಾಗಿದೆ.
ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾಗಿದ್ದ ಪ್ರೊ.ಎಂ.ನಾಗರಾಜ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ನೇಪಥ್ಯಕ್ಕೆ ಸರಿಯುತ್ತಿರುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಹಾಗೂ ಸಂಘ ಪರಿವಾರ ಮೂಲದ ನಾಗರಾಜ ಅವರಿಗೆ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.
ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಪುನಾರಚನೆ
ಇನ್ನು ಇದುವರೆಗೆ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರನ್ನು ಆ ಸ್ಥಾನದಿಂದ ಕೈಬಿಡಲಾಗಿದೆ.
ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮೊದಲ ಹಂತವಾಗಿದ್ದು, ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಪುನಾರಚನೆ ನಡೆಯಬೇಕಿದೆ.
ಸದ್ಯ ರಾಜ್ಯದಿಂದ ಬಿಜೆಪಿಯ ಪ್ರಹ್ಲಾದ್ ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿದ್ದು, ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರು ರಾಜ್ಯ ಖಾತೆ ಸಚಿವರಾಗಿದ್ದಾರೆ. ಈ ಪೈಕಿ ಯಾರನ್ನಾದರೂ ಕೈಬಿಡುತ್ತಾರೆಯೋ ಅಥವಾ ಹೊಸಬರಿಗೆ ಅವಕಾಶ ನೀಡುತ್ತಾರೆಯೋ ಎಂಬುದು ರಾಜ್ಯಾಧ್ಯಕ್ಷ ಹುದ್ದೆಯ ನೇಮಕದ ಜತೆ ತಳಕು ಹಾಕಿಕೊಂಡಿದೆ. ಸಂಪುಟ ಪುನಾರಚನೆ ಬಳಿಕ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಒಂದು ಅಂದಾಜು ಸಿಗಬಹುದು.
ಮೂರನೇ ಹಂತದಲ್ಲಿ ರಾಜ್ಯ ಘಟಕದ ಪುನಾರಚನೆ ನಡೆಯುವುದು ಬಾಕಿಯಿದೆ. ಬಹುತೇಕ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಈ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನವೀನ್ ಟೀಂಗೆ ಪುನಃ ರಾಜ್ಯದ ಸಂತೋಷ್, ನಾಗರಾಜಗೂ ಮಣೆ
ನವದೆಹಲಿ: ನಿತಿನ್ ನವೀನ್ ತಂಡಲ್ಲಿ ಬಿ.ಎಲ್. ಸಂತೋಷ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಲ್ಲಿ ಹುದ್ದೆಯಲ್ಲಿ ಮುಂದುವರಿದಿದ್ದರೆ, ನೂತನ ರಾಜ್ಯಸಭಾ ಸದಸ್ಯ ನಾಗರಾಜು ಅವರನ್ನು ಪಕ್ಷದ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.
