ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ತವ್ಯನಿರತ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಜೆಡಿಎಸ್‌ ಮುಖಂಡನನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗೊಟ್ಟಿಗೆರೆ ನಿವಾಸಿ ಮಂಜುನಾಥ ಸಿ ಅಲಿಯಾಸ್‌ ಗೊಟ್ಟಿಗೆರೆ ಮಂಜಣ್ಣ ( 65) ಬಂಧಿತ ಆರೋಪಿ. ಹಲ್ಲೆಗೊಳಗಾದ ಪೊಲೀಸ್‌ ಕಾನ್‌ಸ್ಟೇಬಲ್‌ ಅರುಣ್‌ ಮಂಜಪ್ಪ ಬಡಗೌಡ್ರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು.

ಪ್ರಕರಣದ ವಿವರ:

ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯ ಗೊಟ್ಟಿಗೆರೆ ಜಂಕ್ಷನ್‌ನ ಬಿ.ಜಿ ರಸ್ತೆಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಅರುಣ್‌ ಮಂಜಪ್ಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸಿಗ್ನಲ್‌ ಬಳಿ ಬಂದ ಗೊಟ್ಟಿಗೆರೆ ಮಂಜನಾಥ ಎಂಬುವವರ ಬೆಂಜ್‌ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಆರೋಪಿಯು ನನ್ನ ಕಾರನ್ನೇ ಅಡ್ಡ ಹಾಕುತ್ತೀಯಾ? ಎಷ್ಟು ಧೈರ್ಯ ನಿಂಗೆ, ನಾನು ಯಾರು ಅಂತಾ ಗೊತ್ತಿಲ್ವಾ ನಿಂಗೆ ಎಂದು ಕೊರಳ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಲೆಯಿಂದ ಮುಖಕ್ಕೆ ಗುದ್ದಿ ಹಾಗೂ ಕೈಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದ.

ಈ ವೇಳೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಗೊಟ್ಟಿಗೆರೆ ಮಂಜಣ್ಣ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕಾಲಿನಿಂದ ಒದೆಯಲು ಯತ್ನಿಸಿ ನಂತರ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ ಹುಳಿಮಾವು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸೋಮವಾರ ಬೆಳಗ್ಗಿನ ಜಾವ ಮೀನಾಕ್ಷಿ ಮಾಲ್‌ ಬಳಿ ಆರೋಪಿ ಗೊಟ್ಟಿಗೆರೆ ಮಂಜಣ್ಣನನ್ನು ಬಂಧಿಸಿದ್ದಾರೆ.


ಜಾಮೀನು ಮಂಜೂರು:

ಬಂಧಿತ ಆರೋಪಿ ಗೊಟ್ಟಿಗೆರೆ ಮಂಜಣ್ಣನನ್ನು ಸೋಮವಾರ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. -ಕೋಟ್‌-

ಕರ್ತವ್ಯನಿರತ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿರುವುದು ಬಾಡಿ ವೋರ್ನ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆ ನಡೆಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

-ಎಂ.ನಾರಾಯಣ, ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಡಿಸಿಪಿ