- ನಿತಿನ್ ನವೀನ್‌ ಹೊಸ ಟೀಂ ಇಂದೇ ಘೋಷಣೆ?

- ಇದಾದ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ

--

- 2029ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಹೊಸ ತಂಡ ರಚನೆಗೆ ಸಿದ್ಧತೆ

- ನೂತನ ಅಧ್ಯಕ್ಷ ನವೀನ್‌ರಿಂದ ಯುವಕರು, ಮಹಿಳೆಯರಿಗೆ ಬಂಪರ್‌ ಆಫರ್‌?


- ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಬದಲಾವಣೆ

- ರಾಷ್ಟ್ರೀಯ ವಕ್ತಾರರು, ವಿವಿಧ ಮೋರ್ಚಾಗಳ ಅಧ್ಯಕ್ಷರು ಕೂಡ ಬದಲು ಸಂಭವ

- ನವೀನ್‌ ಹೊಸ ತಂಡ ರಚನೆ ಬಳಿಕ ಕೇಂದ್ರ ಸಚಿವ ಸಂಪುಟವೂ ಪುನಾರಚನೆ

- ಕೆಲವು ಕೇಂದ್ರ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜಿಸುವ ಸಾಧ್ಯತೆ

==

ನವದೆಹಲಿ: ಕಳೆದ ಜನವರಿಯಲ್ಲಿ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನವೀನ್‌ ಅಧಿಕಾರ ವಹಿಸಿಕೊಂಡ ಬಳಿಕ ಆಗಾಗ್ಗೆ ಕೇಳಿಬರುತ್ತಲೇ ಇದ್ದ, ಬಿಜೆಪಿಯಲ್ಲಿನ ಸಂಘಟನಾತ್ಮಕ ಬದಲಾವಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ಯಾವುದೇ ಕ್ಷಣದಲ್ಲಿ ಬಿಜೆಪಿ ತನ್ನ ಟೀಂ 2029 ಘೋಷಣೆಗೆ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಟೀಂ ರಚನೆ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯೂ ಆಗಲಿದೆ ಎನ್ನಲಾಗಿದೆ.

ಮುಂಬರುವ ಸಾಲು ಸಾಲು ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿಯು ತನ್ನ ಸಂಘಟನೆಯಲ್ಲಿ ಭಾರಿ ಪ್ರಮಾಣದ ಸರ್ಜರಿಗೆ ಮುಂದಾಗಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ‘ಟೀಂ 2029’ ಹೆಸರಿನ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಸೋಮವಾರ ಅಥವಾ ಅತಿ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಕ್ಷದ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನೇತೃತ್ವದಲ್ಲಿ ಹೊಸ ತಂಡ ರೂಪುಗೊಳ್ಳುತ್ತಿದ್ದು, ಯುವಕರು ಹಾಗೂ ಮಹಿಳೆಯರಿಗೆ ಮುಂಚೂಣಿ ಸ್ಥಾನ ನೀಡಲಾಗುವುದು ಎನ್ನಲಾಗಿದೆ. ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ರಾಷ್ಟ್ರೀಯ ವಕ್ತಾರರು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷ ಹುದ್ದೆಗಳಿಗೆ ಹೊಸ ಮುಖಗಳನ್ನು ಆಯ್ಕೆ ಮಾಡುವುದು ಈ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಯ ವೇಳೆಯೂ ಹೊಸ ತಂಡ ಘೋಷಣೆಗೆ ಪಕ್ಷ ಸಜ್ಜಾಗಿತ್ತಾದರೂ ಆಗ ದೇಶವ್ಯಾಪಿ ನೀಟ್‌ ಪರೀಕ್ಷಾ ಅಕ್ರಮದ ಗದ್ದಲ ಜೋರಾಗಿದ್ದ ಹಿನ್ನೆಲೆಯಲ್ಲಿ ಹೊಸ ತಂಡ ರಚನೆ ಘೋಷಣೆ ಮುಂದೂಡಲಾಗಿತ್ತು. ಆದರೆ ಇತ್ತೀಚಿನ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ವಿಪಕ್ಷಗಳ ಗಲಾಟೆಯ ನಡುವೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಸಾಲು ಸಾಲು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದ ರಾಜ್ಯಸಭಾ ಚುನಾವಣೆ ಹಾಗೂ ದೇಶಾದ್ಯಂತ ನಡೆದ ನೀಟ್ ಪ್ರತಿಭಟನೆಗಳ ಕಾರಣದಿಂದ ಮುಂದೂಡಲ್ಪಟ್ಟಿದ್ದ ಈ ಪ್ರಕ್ರಿಯೆಗೆ ಈಗ ಅಂತಿಮ ಸ್ಪರ್ಶ ನೀಡಲಾಗಿದೆ ಎನ್ನಲಾಗಿದೆ.

30 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನುಭವಿಸಿದ ಅನಿರೀಕ್ಷಿತ ಸೋಲು ಪಕ್ಷದ ನಾಯಕತ್ವಕ್ಕೆ ದೊಡ್ಡ ಆಘಾತ ನೀಡಿದೆ. ನಗರ ಪ್ರದೇಶಗಳಲ್ಲಿ ಮತಬ್ಯಾಂಕ್ ಕುಸಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಆತ್ಮಾವಲೋಕನ ಮಾಡಿಕೊಂಡು ಸಂಘಟನಾತ್ಮಕವಾಗಿ ಪಕ್ಷವನ್ನು ಪುನಾರಚಿಸಲು ನಿರ್ಧರಿಸಿದೆ.

ಸಂಪುಟ ಪುನಾರಚನೆಗೂ ಹಾದಿ ಸುಗಮ:

ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಪ್ರಮುಖ ರಾಜ್ಯಗಳ ಮುಂಬರುವ ಚುನಾವಣೆಗೆ ಹೊಸ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಈ ದೊಡ್ಡ ಮಟ್ಟದ ಬದಲಾವಣೆಯ ಭಾಗವಾಗಿ ಕೆಲವು ಕೇಂದ್ರ ಸಚಿವರನ್ನು ಪಕ್ಷದ ಸಂಘಟನಾತ್ಮಕ ಜವಾಬ್ದಾರಿಗೆ ತರುವ ಮತ್ತು ಸಂಘಟನೆಯಲ್ಲಿ ಸಕ್ರಿಯರಾಗಿರುವ ನಾಯಕರನ್ನು ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯೂ ಶೀಘ್ರದಲ್ಲೇ ನಡೆಯಲಿದೆ. ಪಕ್ಷದಲ್ಲಿನ ಹೊಸ ಟೀಂ ರಚನೆ ಬಳಿಕ ಕೇಂದ್ರ ಸಚಿವ ಸಂಪುಟದಲ್ಲೂ ಬದಲಾವಣೆ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.