‘ವಂದೇ ಮಾತರಂ’ಗೀತೆಗೆ ಅಗೌರವ ಆರೋಪ । ಬಿಜೆಪಿ ಯುವ ಮೋರ್ಚಾ ಆಕ್ರೋಶ; ಬಿಗಿ ಬಂದೋಬಸ್ತ್

ಕನ್ನಡಪ್ರಭ ವಾರ್ತೆ ಬೀದರ್‌‘ವಂದೇ ಮಾತರಂ’ ಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಬೀದರ್‌ನ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ಬಿಜೆಪಿ ನಗರ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಶಶಿ ಹೊಸಳ್ಳಿ ಮಾತನಾಡಿ, ‘ವಂದೇ ಮಾತರಂ’ ಕೇವಲ ಒಂದು ಗೀತೆಯಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಲ್ಲಿ ರಾಷ್ಟ್ರಭಕ್ತಿ ಮತ್ತು ದೇಶಾಭಿಮಾನದ ಭಾವನೆ ಮೂಡಿಸಿದ ಮಹತ್ವದ ರಾಷ್ಟ್ರೀಯ ಗೀತೆಯಾಗಿದೆ. ಇಂತಹ ಗೀತೆಗೆ ಅಗೌರವ ತೋರುವ ಯಾವುದೇ ಪ್ರಯತ್ನ ಸಹಿಸಲು ಸಾಧ್ಯವಿಲ್ಲ ಎಂದ ಅವರು ‘ವಂದೇ ಮಾತರಂ’ ಹಾಡುತ್ತಿದ್ದ ಸಂದರ್ಭದಲ್ಲಿ ಕೈ ಸನ್ನೆ ಮೂಲಕ ಅದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ದೇಶದ ಪ್ರತಿಯೊಬ್ಬ ದೇಶಭಕ್ತನ ಭಾವನೆಗಳಿಗೆ ನೋವುಂಟು ಮಾಡಿದೆ. ಈ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಶಶಿ ಹೊಸಳ್ಳಿ ಆಗ್ರಹಿಸಿದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹಿರಿಯ ಹಾಗೂ ಅನುಭವಿ ನಾಯಕರು ಇದ್ದಾರೆ. ಈ ವಿಚಾರವನ್ನು ಪಕ್ಷದ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಿ, ಇಂತಹ ಘಟನೆಗಳು ಮರುಕಳಿಸದಂತೆ ತಮ್ಮ ಪಕ್ಷದ ನಾಯಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯ ವೇಳೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ಕಚೇರಿ ಮುತ್ತಿಗೆ ಯತ್ನ ತಡೆಯಲಾಯಿತು.ಪ್ರತಿಭಟನೆಯಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ಸ್ವಾಮಿ, ರಮೇಶ ಕಲ್ಲೂರ, ದೀಪಕ ಗಾದಗಿ, ರಾಜೇಂದ್ರ ಪೂಜಾರಿ, ಗಣೇಶ್ ಭೋಸ್ಲೆ, ರೋಷನ್ ವರ್ಮಾ, ನಿತಿನ್ ನವಲಕಲೆ, ನರೇಶ್ ಗೌಳಿ, ಸಚಿನ ಮಠಪತಿ, ಶರಣು ಸಿದ್ದವೀರ, ವೀರೇಂದ್ರ ಪಾಟೀಲ ಸೇರಿದಂತೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.--ಚಿತ್ರ 16ಬಿಡಿಆರ್62ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಬೀದರ್‌ನ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.--