ಚಾಮರಾಜನಗರದ ಹನೂರಿನಲ್ಲಿ ಅರಣ್ಯಾಧಿಕಾರಿಗಳ ಗುಂಡಿಗೆ 3 ಮಂದಿ ಬಲಿಯಾದ ಘಟನೆಯನ್ನು ಹತ್ಯಾಕಾಂಡ ಎಂದು ಕಿಡಿಕಾರಿರುವ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಚೆನ್ನೈ: ಚಾಮರಾಜನಗರದ ಹನೂರಿನಲ್ಲಿ ಅರಣ್ಯಾಧಿಕಾರಿಗಳ ಗುಂಡಿಗೆ 3 ಮಂದಿ ಬಲಿಯಾದ ಘಟನೆಯನ್ನು ಹತ್ಯಾಕಾಂಡ ಎಂದು ಕಿಡಿಕಾರಿರುವ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ವಿಪಕ್ಷಗಳಾದ ಡಿಎಂಕೆ ಮತ್ತು ಪಿಎಂಕೆ ಕೂಡಾ ದಾಟಿಯಲ್ಲಿ ಆಗ್ರಹ ಮಾಡಿವೆ.

ಈ ಮೂಲಕ ತಮಿಳುನಾಡು ಸರ್ಕಾರ ಮತ್ತು ವಿಪಕ್ಷಗಾಳು ಘಟನೆಗೆ ಭಾಷೆ ಮತ್ತು ಪ್ರಾದೇಶಿಕ ಬಣ್ಣ ಕಟ್ಟಿ ಹೊಸ ಕಲಹಕ್ಕೆ ನಾಂದಿ ಹಾಡುವ ಯತ್ನ ಮಾಡಿವೆ. ಈ ಮೂಲಕ ಕರ್ನಾಟಕದ ಜೊತೆಗೆ ಕಾವೇರಿ, ಮೇಕೆದಾಟು ಬಳಿಕ ಮತ್ತೊಂದು ಸಂಘರ್ಷಕ್ಕೆ ಮುಂದಾಗಿವೆ.

ಹತ್ಯಾಕಾಂಡ:

ಹನೂರು ಘಟನೆ ಕುರಿತು ಭಾನುವಾರ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ವಿಜಯ್‌, ‘ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಮಿಳಿಗರೇ ವಾಸಿಸುವ ಗ್ರಾಮದ ಆ್ಯಂಟೋನಿ ಸಾಮಿ, ಜಾನ್‌ ರೋಸ್‌ ಪೀಟರ್‌ ಮತ್ತು ಕುಮಾರ್‌ ಆ.15ರಂದು ಅರಣ್ಯ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದು ಹೃದಯವಿದ್ರಾವಕ ಘಟನೆ. ಈ ಹತ್ಯಾಕಾಂಡವನ್ನು ನಾನು ಅತ್ಯಂತ ಬಲವಾಗಿ ಖಂಡಿಸುತ್ತೇನೆ. ಘಟನೆ ಕುರಿತು ಕರ್ನಾಟಕದ ಅರಣ್ಯ ಅಧಿಕಾರಿಗಳು ನೀಡಿರುವ ಹೇಳಿಕೆ ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.

ಜೊತೆಗೆ, ‘ಈ ಕ್ರೂರ ಘಟನೆಯ ಕುರಿತು ಪ್ರಾಮಾಣಿಕೆ ತನಿಖೆ ನಡೆಸಬೇಕು. ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ಖಚಿತಪಡಿಸಬೇಕು. ನೊಂದ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ನೆರವು ನೀಡಬೇಕು. ಅಲ್ಲದೆ ಮುಂದೆ ಇಂಥ ಘಟನೆ ನಡೆಯದಂತೆ ಕರ್ನಾಟಕ ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ’ ಎಂದು ಸಿಎಂ ವಿಜಯ್‌ ಹೇಳಿದ್ದಾರೆ.

ವಿಪಕ್ಷಗಳಿಂದಲೂ ಕಿಡಿ:

ಈ ನಡುವೆ ವಿಪಕ್ಷಗಳಾದ ಡಿಎಂಕೆ ಮತ್ತು ಪಿಎಂಕೆ ಕೂಡಾ ಮೃತರನ್ನು ತಮಿಳರು ಎಂದು ಗುರುತಿಸುವ ಮೂಲಕ ಘಟನೆಗೆ ಭಾಷೆಯ ಬಣ್ಣ ಕಟ್ಟಿವೆ.

ಈ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌, ‘ಮೂವರು ತಮಿಳರ ಹತ್ಯೆ ಘಟನೆ ಕ್ರೂರ ಮತ್ತು ಆಘಾತಕಾರಿ. ಇದರ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಆಗಬೇಕು ಹಾಗೂ ಗುಂಡು ಹಾರಿಸಿದ ಅರಣ್ಯಾಧಿಕಾರಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಅಂತೆಯೇ, ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಅತ್ತ ಸಿಬಿಐ ತನಿಖೆಗೆ ಆಗ್ರಹಿಸಿರುವ ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್‌, ಆ ಮೂವರೂ ಬೇಟೆಗಾರರು ಎಂಬುದು ಸುಳ್ಳು. ಸಿಎಂ ವಿಜಯ್‌ ಮಧ್ಯಪ್ರವೇಶಿಸಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ಕಡೆಯಿಂದ 1 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಮಿಳ್ನಾಡಿನ ಆಕ್ರೋಶ

- ಹನೂರು ಎನ್‌ಕೌಂಟರ್‌ನಲ್ಲಿ ಮೃತರಾದ ಮೂವರು ತಮಿಳು ಭಾಷಿಕರು

- ಭಾಷೆ ಹಾಗೂ ರಾಜ್ಯ-ರಾಜ್ಯ ನಡುವಿನ ವೈಷಮ್ಯದ ಸ್ವರೂಪ ಪಡೆದ ಕೇಸು

- ನೊಂದ ಕುಟುಂಬಕ್ಕೆ ಕರ್ನಾಟಕ ನೆರವು ನೀಡಲಿ ಎಂದು ವಿಜಯ್‌ ಆಗ್ರಹ

- ವಿಪಕ್ಷಗಳಾದ ಡಿಎಂಕೆ, ಪಿಎಂಕೆಯಿಂದಲೂ ಪ್ರಕರಣಕ್ಕೆ ಭಾಷೆಯ ಬಣ್ಣ

- ಮೃತರಿಗೆ ಕರ್ನಾಟಕ ₹1 ಕೋಟಿ ಪರಿಹಾರ ಕೊಡಬೇಕು ಎಂದು ಪಟ್ಟು