ಸಾಲುಸಾಲು ಪ್ರಶ್ನೆಪತ್ರಿಕೆ ಸೋರಿಕೆಗಳಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪಾಲಿಗೆ ಮತ್ತೊಂದು ಮುಜುಗರ ಎದುರಾಗಿದೆ. ಜೂನ್‌ನಲ್ಲಿ ನಡೆದ ಯುಜಿಸಿ ನೆಟ್‌ ಪರೀಕ್ಷೆಯ 3 ಪ್ರಶ್ನೆಪತ್ರಿಕೆಗಳಲ್ಲಿ ಲೋಪವಿದ್ದುದು ಕಂಡುಬಂದಿದೆ. ಇದರ ಬೆನ್ನಲ್ಲೇ ಮರು-ಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಘೋಷಿಸಿದೆ.

ಪರೀಕ್ಷೆ ನಡೆಸಿದ್ದ ಎನ್‌ಟಿಎಗೆ ಮತ್ತೆ ಮುಜುಗರ

ನವದೆಹಲಿ: ಸಾಲುಸಾಲು ಪ್ರಶ್ನೆಪತ್ರಿಕೆ ಸೋರಿಕೆಗಳಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪಾಲಿಗೆ ಮತ್ತೊಂದು ಮುಜುಗರ ಎದುರಾಗಿದೆ. ಜೂನ್‌ನಲ್ಲಿ ನಡೆದ ಯುಜಿಸಿ ನೆಟ್‌ ಪರೀಕ್ಷೆಯ 3 ಪ್ರಶ್ನೆಪತ್ರಿಕೆಗಳಲ್ಲಿ ಲೋಪವಿದ್ದುದು ಕಂಡುಬಂದಿದೆ. ಇದರ ಬೆನ್ನಲ್ಲೇ ಮರು-ಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಘೋಷಿಸಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಎನ್‌ಟಿಎ, ‘3 ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಲೋಪಗಳು ಕಂಡುಬಂದ ಬಗ್ಗೆ ಪರೀಕ್ಷಾರ್ಥಿಗಳು ದೂರು ನೀಡಿದ್ದರು. ನಮ್ಮ ಸಮಿತಿ ಅದರ ಪರಿಶೀಲನೆ ನಡೆಸಿದ ವೇಳೆ, ವಾಸ್ತವಾಂಶದಲ್ಲಿ ತಪ್ಪು, ಮುದ್ರಣ ದೋಷ, ಅನುವಾದದ ದೋಷ, ವಿದ್ವಾಂಸರ ಹೆಸರುಗಳಲ್ಲಿ ಲೋಪ, ಪುಸ್ತಕದ ಶೀರ್ಷಿಕೆಗಳಲ್ಲಿನ ಗೊಂದಲಮಯ ರೂಪ ಹಾಗೂ ಪ್ರಶ್ನೆಗಳ ನಿರೂಪಣೆಯಲ್ಲಿನ ನ್ಯೂನತೆ, ವ್ಯಾಕರಣ, ಸಂಖ್ಯಾತ್ಮಕ ದೋಷ, ಅಸ್ಪಷ್ಟ ಆಯ್ಕೆಗಳು, ಪ್ರಶ್ನೆಗಳು ಅಥವಾ ಉತ್ತರ ಆಯ್ಕೆಗಳ ಪುನರಾವರ್ತನೆ ಕಂಡುಬಂದಿವೆ’ ಎಂದು ತಿಳಿಸಿದೆ. ಉತ್ತರಪತ್ರಿಕೆಗಳನ್ನು ತಿದ್ದುವಾಗ ತಪ್ಪಾದ ಪ್ರಶ್ನೆಗಳನ್ನು ಪರಿಗಣಿಸದೇ ಇರುವುದು ಪರಿಹಾರವಲ್ಲ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಮರು-ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಒಟ್ಟು 87 ವಿಷಯಗಳ ಪರೀಕ್ಷೆ ನಡೆಸಲಾಗಿತ್ತು.

ಮರು-ಪರೀಕ್ಷೆ ಯಾವಾಗ?:

ಸೆ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಇಂಗ್ಲಿಷ್‌, ಅದೇ ದಿನ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರ ವರೆಗೆ ಕಾಮರ್ಸ್‌, ಸೆ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಸಮಾಜಶಾಸ್ತ್ರ ಪರೀಕ್ಷೆ ನಡೆಯಲಿವೆ.