ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನೀಟ್ ಸೋರಿಕೆ ವಿವಾದ ತಣ್ಣಗಾಗುವ ಮುನ್ನವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪ್ರಶ್ನೆಪತ್ರಿಕೆಯೂ ಸೋರಿಕೆಯಾದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಆರೋಪದ ಕುರಿತು ಕೂಲಕಂಷವಾಗಿ ಪರಿಶೀಲನೆ ನಡೆಸುವಂತೆ ಶಿಕ್ಷಣ ಸಚಿವಾಲಯವು ಎನ್‌ಟಿಎಗೆ ಸೂಚನೆ ನೀಡಿದೆ.
ಇದೇ ಜೂ.22ರಿಂದ 30ರವರೆಗೆ ದೇಶಾದ್ಯಂತ ಯುಜಿಸಿ-ನೆಟ್ ಪರೀಕ್ಷೆ ನಡೆಸಲಾಗಿತ್ತು. ವಿವಿಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ವರ್ಷಕ್ಕೆ 2 ಬಾರಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ ವಿವಾದ ತೀವ್ರಗೊಂಡಿದೆ.
ಆರೋಪವೇನು?:
ಯುಜಿಸಿ-ನೆಟ್‌ನ ಸಮಾಜಶಾಸ್ತ್ರ ಪರೀಕ್ಷೆಯ ಮುನ್ನಾದಿನ 100 ಪುಟಗಳ ಪಿಡಿಎಫ್ ಎಲ್ಲೆಡೆ ಹರಿದಾಡಿತ್ತು. ಮರುದಿನ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳ ಪೈಕಿ ಸುಮಾರು 90 ಪ್ರಶ್ನೆಗಳು ಈ ಪಿಡಿಎಫ್‌ನಲ್ಲಿ ಇದ್ದವೇ ಆಗಿದ್ದವು. ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲಿ 2.25 ಲಕ್ಷ ರು.ಗಳಿಗೆ ಈ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಆರೋಪದ ಕುರಿತು ಸೂಕ್ತ ಪರಿಶೀಲನೆ ನಡೆಸುವಂತೆ ಶಿಕ್ಷಣ ಸಚಿವಾಲಯ ಎನ್‌ಟಿಎಗೆ ಸೂಚಿಸಿದೆ. ಆದರೆ ಎನ್‌ಟಿಎಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕಳೆದ ಮೇ 3ರಂದು ನೀಟ್ ಪರೀಕ್ಷೆ ನಡೆಸಲಾಗಿತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆಯನ್ನು ರದ್ದುಪಡಿಸಿ ಜೂ.21ರಂದು ಮರುಪರೀಕ್ಷೆ ನಡೆಸಲಾಯಿತು. ಈ ಆಘಾತದಿಂದ ದೇಶಾದ್ಯಂತ ಹತ್ತಾರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಇದು ತೀವ್ರ ರಾಜಕೀಯ ಮತ್ತು ಕಾನೂನು ಸಮರಕ್ಕೂ ಕಾರಣವಾಗಿತ್ತು.
- ಜೂನ್‌ನಲ್ಲಿ ದೇಶಾದ್ಯಂತ ನಡೆದಿದ್ದ ನೆಟ್ ಪರೀಕ್ಷೆ
- ವಿವಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಈ ಎಕ್ಸಾಂ
- ಸಮಾಜಶಾಸ್ತ್ರ ಪತ್ರಿಕೆ ಲೀಕ್: ರಾಹುಲ್ ಆರೋಪ
- ಪರೀಕ್ಷೆ ಮುನ್ನಾದಿನ 100 ಪುಟದ ಪಿಡಿಎಫ್ ಶೇರ್
- ಯುಪಿ ಸೇರಿ ಹಲವು ರಾಜ್ಯದಲ್ಲಿ ₹2.25 ಲಕ್ಷಕ್ಕೆ ಬಿಕರಿ?
- ಆರೋಪದ ಬಗ್ಗೆ ಕೂಲಂಕಷ ಪರಿಶೀಲನೆ: ಶಿಕ್ಷಣ ಇಲಾಖೆ
